ಯಲ್ಲಾಪುರ : ಸೆಪ್ಟೆಂಬರ್ 5ರ ರಾತ್ರಿ 9:20ರ ಸುಮಾರಿಗೆ ಯಲ್ಲಾಪುರ ಪಟ್ಟಣದಲ್ಲಿ ಸರಣಿ ಅಪಘಾತದಲ್ಲಿ ಒಟ್ಟು ಎಂಟು ಜನರು ಗಾಯಗೊಂಡಿದ್ದಾರೆ. ಅಪಘಾತವು ನ್ಯೂ ಮಲಬಾರ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹುಬ್ಬಳ್ಳಿ ನಿವಾಸಿ, 41 ವರ್ಷದ ಲಾರಿ ಚಾಲಕ ಶಿವಾಜಿ ರಾಮಚಂದ್ರ ತಂಗಡಗಿ, ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷದಿಂದ ಚಾಲನೆ ಮಾಡಿ, ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಿಂದಾಗಿ, ಲಾರಿ ಸ್ವಲ್ಪ ಮುಂದೆ ಹೋಗಿ, ಅದೇ ದಾರಿಯಲ್ಲಿ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ಸಿಗೆ ಡಿಕ್ಕಿ ಹೊಡೆದು ಹೆಚ್ಚಿನ ಹಾನಿಯನ್ನುಂಟುಮಾಡಿದ್ದಾನೆ.
ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಟೇಶ್ ವೆಂಕಟೇಶ ಮೂಡಲ ಹಿಪ್ಪೆ (29), ಆಯುಬ್ ಖಾನ್ ಅಮಿರ್ ಖಾನ್ (45), ಸಲೀಂ ಖಾದರ್ (36), ಆಶಾಲತಾ ಸುಂದರ ಶೆಟ್ಟಿ (42), ಲಕ್ಷ್ಮಿ ಕೃಷ್ಣ ಪೂಜಾರಿ (76), ಟೆಲ್ಮಾ ಎಂ ದಯಾನಂದ ಡಿಸೋಜಾ (53), ಜಯಲಕ್ಷ್ಮಿ ಆನಂದ ಪೂಜಾರಿ (54) ಸೇರಿದ್ದಾರೆ.
ಗಾಯಾಳುಗಳನ್ನು ತಕ್ಷಣ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಅಪಘಾತದ ಸಂಬಂಧ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.