ಯಲ್ಲಾಪುರ : ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದ ಪ್ರಸಿದ್ಧ ಕಲಾವಿದ ಚೂಡಾಮಣಿ ಶೇಷು ಬಾಂದೊಡ್ಕರ್ ಮತ್ತು ಅವರ ಕುಟುಂಬದವರು ಕಳೆದ 40 ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಪವಿತ್ರ ಕಾರ್ಯವನ್ನು ನಿರಂತರವಾಗಿ ನಡೆಸಿ, ಪರಿಸರ ಸ್ನೇಹಿ ಹಬ್ಬದ ಆಚರಣೆಗೆ ಪಣತೊಟ್ಟಿದ್ದಾರೆ. ಈ ಕುಟುಂಬದವರ ಈ ಶ್ರಮವು ಅವರ ತಂದೆ ದಿ.ಶೇಷು ಬಾಂದೊಡ್ಕರರಿಂದ ಪ್ರಾರಂಭಗೊಂಡದ್ದು. ಈಗ ಅವರ ಮಗ ಚೂಡಾಮಣಿ ಬಾಂದೊಡ್ಕರ್ ಅವರ ಪತ್ನಿ, ತಾಯಿ, ಮತ್ತು ತಂಗಿಯ ಸಹಕಾರದಿಂದ ಈ ಕಲೆಯನ್ನು ಮುಂದುವರಿಸುತ್ತಿದ್ದಾರೆ.
ಪ್ರತಿ ವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ, ಮಣ್ಣಿನ ಗಣೇಶನಿಗೆ ಬೃಹತ್ ಬೇಡಿಕೆ ಇರುವುದು ವಿಶೇಷವಾಗಿದೆ. ಇವರು ತಯಾರಿಸುವ ಮೂರ್ತಿಗಳು ಸುತ್ತಮುತ್ತಲಿನ ತಾಲೂಕು ಮಟ್ಟದಲ್ಲಿಯೂ ಪ್ರಸಿದ್ಧಿ ಪಡೆದಿವೆ.
ಮೂರ್ತಿ ತಯಾರಿಕೆಗೆ ಮುಹೂರ್ತ:
ಚೂಡಾಮಣಿ ಬಾಂದೊಡ್ಕರ್ ಅವರು ಚತುರ್ಥಿಯ ಮೂರು ತಿಂಗಳು ಮೊದಲು ಮೂರ್ತಿಯ ತಯಾರಿಕೆಯನ್ನು ಆರಂಭಿಸುತ್ತಾರೆ. ಮಣ್ಣಿನ ಮೂರ್ತಿಗಳನ್ನು ಪ್ರಾಕೃತಿಕ ವಿಧಾನದಲ್ಲಿ ಮಾಡುವ ಇವರು ಸ್ಥಳೀಯವಾಗಿ ದೊರೆಯುವ ಶುದ್ಧ ಮಣ್ಣಿನ ಬಳಕೆ ಮಾಡುತ್ತಾರೆ. ಹುಣಶೆಟ್ಟಿಕೊಪ್ಪದ ಹೊಲವೊಂದರಲ್ಲಿ ಉತ್ತಮ ಗುಣಮಟ್ಟದ 6 ಇಂಚು ಮೇಲ್ಪದರದ ಮಣ್ಣು ತೆಗೆದು ಸಂಗ್ರಹಿಸಲಾಗುತ್ತದೆ, ನಂತರ ಅದನ್ನು ಸಂಗ್ರಹ ಮಾಡಿ ಕುಟ್ಟಿ ಸಾಣಿ ಹಿಡಿದು ಬಳಸುತ್ತಾರೆ. ಬಳಿಕ ಈ ಮಣ್ಣು ಅನೇಕ ಹಂತಗಳಲ್ಲಿ ಶಿಲ್ಪವನ್ನಾಗಿ ರೂಪಾಂತರಗೊಳ್ಳುತ್ತದೆ.
ಇವರು ತಯಾರಿಸುವ ಗಣೇಶ ಮೂರ್ತಿಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದು, ಯಾವುದೇ ರಾಸಾಯನಿಕ ಬಣ್ಣಗಳ ಬಳಕೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿದ್ದಾರೆ. ಇದು ಪರಿಸರ ಸ್ನೇಹಿ ಗಣೇಶನ ತಯಾರಿಕೆಗೆ ಮಾದರಿಯಾಗಿದೆ.
ಪ್ರಸಿದ್ಧ ಸ್ಥಳಗಳಿಗೆ ಗಣಪ ಮೂರ್ತಿಗಳ ಪೂರೈಕೆ:
ಚೂಡಾಮಣಿ ಬಾಂದೊಡ್ಕರ್ ಅವರು ಯಲ್ಲಾಪುರ, ಮುಂಡಗೋಡ, ಗುಂಜಾವತಿ, ಕೊಡಸೆ ಮತ್ತು ಇತರ ಗ್ರಾಮಗಳ ಗಣೇಶೋತ್ಸವಗಳಿಗೆ ಬೃಹತ್ ಮೂರ್ತಿಗಳನ್ನು ತಯಾರಿಸುತ್ತಾರೆ. 3.5 ಅಡಿ, 4 ಅಡಿ ಮತ್ತು 4.5 ಅಡಿ ಎತ್ತರದ ವಿವಿಧ ಗಣಪ ಮೂರ್ತಿಗಳನ್ನು ತಯಾರಿಸಿದ ಇವರು, ಸ್ಥಳೀಯ ಗಣೇಶೋತ್ಸವ ಸಮಿತಿಗಳಿಗೆ ಮಾತ್ರವಲ್ಲ, ಹೋಬಳಿ, ತಾಲೂಕಿನ ವಿವಿಧೆಡೆ ಮೂರ್ತಿಗಳನ್ನು ತಯಾರಿಸಿ ಕೊಡುತ್ತಾರೆ.
ಕುಟುಂಬದ ಬೆಂಬಲ:
ಈ ಕಲಾವಿದನಿಗೆ ಕುಟುಂಬದವರ ಬೆಂಬಲ ಅಪಾರವಾಗಿದೆ. ಈ ಕಾರ್ಯದಲ್ಲಿ ತಾಯಿ ಲಕ್ಷ್ಮಿ, ಪತ್ನಿ ನಿಖಿತಾ, ಮತ್ತು ತಂಗಿ ದಿವ್ಯಾ ಬಾಂದೊಡ್ಕರ್‌ರ ಸಹಕಾರ ಅತ್ಯಂತ ಮಹತ್ತರವಾಗಿದೆ. ಗಣೇಶನ ತಯಾರಿಕೆಯಲ್ಲಿ ಅವರು ತಮ್ಮ ಕುಟುಂಬದ ಸಾಂಪ್ರದಾಯಿಕ ಕೌಶಲ್ಯವನ್ನು ಬಳಸುತ್ತಾರೆ.
ಚೂಡಾಮಣಿ ಬಾಂದೊಡ್ಕರ್ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ, ಚತುರ್ಥಿಯ ಸಂದರ್ಭದಲ್ಲಿ ಊರಿಗೆ ಹಿಂತಿರುಗಿ, ತಾತ್ಕಾಲಿಕವಾಗಿ ತಮ್ಮ ಈ ಶ್ರೇಷ್ಠ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.
ಪರಿಸರ ಸ್ನೇಹಿ ಇಡೀ ಉತ್ಸವ:
ಚೂಡಾಮಣಿ ಬಾಂದೊಡ್ಕರ್‌ರ ಈ ಕಾರ್ಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಆವರಣವಿಲ್ಲದೆ ಪ್ರತಿಷ್ಠಾಪನೆ ಮಾಡಲಾಗಿದೆ. ಇದರೊಂದಿಗೆ, ಇವರು ಸಮಾಜದ ಪರಿಸರ ಸಂರಕ್ಷಣೆಗಾಗಿ ಬಹು ದೊಡ್ಡ ಸಂದೇಶವನ್ನು ಸಾರುತ್ತಿದ್ದಾರೆ.