
ಗುರುವಾರದಂದು ನಡೆದ ಈ ಭಕ್ತಿಭಾವ ಪೂರ್ಣ ಕಾರ್ಯಕ್ರಮವು ಮಹಾಗಣಪತಿಯ ಮಹಾ ಮಂಗಳಾರತಿಯೊಂದಿಗೆ ಆರಂಭವಾಯಿತು. ವಿಶೇಷ ಕಾರ್ಯಕ್ರಮದ ಅಂಗವಾಗಿ ವಿಠ್ಠಲ-ರುಕ್ಮಾಯಿ ಭಜನಾ ಮಂಡಳಿ, ಗಣೇಶನ ಸ್ಮರಣಾರ್ಥ ಭಜನೆ ಮತ್ತು ಹಾಡುಗಳ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡಿದರು.
ಇದೇ ಸಮಾರಂಭದಲ್ಲಿ ಗಮನಾರ್ಹವಾಗಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾರಾಯಣ ಕಾಂಬಳೆ ಮತ್ತು ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗಾಯತ್ರಿ ಗದ್ದೆಮನೆ ಅವರನ್ನು, ಜೊತೆಗೆ ಕಿರವತ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ಡರ ಅವರನ್ನು ಸಮಿತಿಯು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸನ್ಮಾನ ಕಾರ್ಯಕ್ರಮವು ಊರಿನ ನಾಗರಿಕರು, ವಿದ್ಯಾರ್ಥಿಗಳು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದಿತ್ತು.
ಕಾರ್ಯಕ್ರಮದಲ್ಲಿ ಹ್ಯಾಂಗೊ ಹಾಗೂ ದೊಡ್ಲ ಡೈರಿಗಳ ಸಿಬ್ಬಂದಿ-ಕಾರ್ಮಿಕರು, ಹೊಸಳ್ಳಿ ಸ.ಹಿ.ಪ್ರ. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡ ಪಾಲ್ಗೊಂಡಿದ್ದರು. ಅಲ್ಲದೇ, ಹೊಸಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ಗಣಪತಿ ಕೃಪೆಗೆ ಪಾತ್ರರಾಗಲು ಬಂದು ಈ ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು.


ಪ್ರತಿ ವರ್ಷ ವಿಬಿನ್ನ ಡೆಕೊರೋಷನ್ ಮೂಲಕ ಗಮನ ಸೆಳೆಯುತ್ತಿರುವ ಹೊಸಳ್ಳಿ ಗಣೇಶೋತ್ಸವ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ, ಸೆಪ್ಟೆಂಬರ್ 15 ನಡೆಯಲಿದೆ, ಶೋಭಾಯಾತ್ರೆ ಮೆರವಣಿಗೆ ಹಾಗೂ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶನನ್ನು ವಿಸರ್ಜಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯವರು ತಿಳಿಸಿದರು.
ಹೊಸಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಪವಿತ್ರ ಗಜಾನನೋತ್ಸವದಲ್ಲಿ ತಾವೂ ಕೂಡ ಭಾಗಿಯಾಗಿ ಗಣೇಶನ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ಮನವಿ ಮಾಡಿದೆ.
.
.
.