ಯಲ್ಲಾಪುರ: ಮಾತೃಭೂಮಿ ಸೇವಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ, ದಿ. ವೆಂಕಣ್ಣಾಚಾರ್ಯರ "ಸಂದೇಶ ರಾಮಾಯಣ" ಮತ್ತು ಶ್ರೀರಂಗ ಕಟ್ಟಿ ವಿರಚಿತ "ಬ್ಯಾಸರಕಿ ಬ್ಯಾಡೊ ನಗುವಾಗ" ಎಂಬ ಕೃತಿಗಳ ಲೋಕಾರ್ಪಣೆ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 10.00 ಗಂಟೆಗೆ ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜರುಗಲಿದೆ.
ಈ ಸಂದರ್ಭದ ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ ಭಾಗವಹಿಸಲಿದ್ದಾರೆ. ಲೋಕಾರ್ಪಣಾ ಸಮಾರಂಭವನ್ನು ಹಿರಿಯ ಸಾಹಿತಿ ಮತ್ತು ಪತ್ರಕರ್ತ ಅರುಣಕುಮಾರ ಹಬ್ಬು ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವನರಾಗ ಶರ್ಮಾ ವಹಿಸಲಿದ್ದಾರೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಕಾರ್ಯಕ್ರಮದ ಮಾಹಿತಿ ನೀಡಿದ್ದಾರೆ.
ವೆಂಕಣ್ಣಾಚಾರ್ಯರ ಕುರಿತು :
ವೆಂಕಣ್ಣಾಚಾರ್ಯರು ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿಯವರು. 15 ವರ್ಷದ ಬಾಲಕನಾಗಿದ್ದಾಗಲೇ ಮಹಾತ್ಮಾ ಗಾಂಧಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಬ್ರಿಟೀಷರ ಲಾಠಿ ಏಟಿಗೆ ತಮ್ಮ ಒಂದು ಕಣ್ಣು ಮತ್ತು ಕಿವಿಯನ್ನು ಕಳೆದುಕೊಂಡರೂ, ಅವರು ಧೈರ್ಯವನ್ನು ಕಳೆದುಕೊಂಡಿಲ್ಲ.
ಅವರು ಖ್ಯಾತ ರಂಗಕರ್ಮಿ ಏಣಗಿ ಬಾಳಪ್ಪನವರ ನಾಟಕ ಕಂಪನಿಯಲ್ಲಿ ಪ್ರಧಾನ ನಟರಾಗಿ ಕಾರ್ಯನಿರ್ವಹಿಸಿದರು. ಭಾರತೀಯ ಸ್ವಾತಂತ್ರ್ಯ ನಂತರ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ರಂಗಭೂಮಿಯ ಪ್ರೀತಿ ಮತ್ತು ಸೇವೆಯನ್ನು ಮುಂದುವರಿಸಿದರು. 'ಕಾಲಚಕ್ರ', 'ಸತ್ಯ ಪರಂಜ್ಯೋತಿ', 'ಪ್ರಮದೆಯರ ಪಾರ್ಲಿಮೆಂಟ್', 'ಕಿತ್ತೂರ ಚೆನ್ನಮ್ಮ' ಮುಂತಾದ ನಾಟಕಗಳನ್ನು ರಚಿಸಿದ ಅವರು, ಅನೇಕ ಪ್ರದರ್ಶನಗಳಲ್ಲಿ ಜನಮೆಚ್ಚುಗೆ ಗಳಿಸಿದರು.
ಏಕಪಾತ್ರಾಭಿನಯದಲ್ಲಿ “ಎತ್ತಿದ ಕೈ" ಎಂಬ ಖ್ಯಾತಿ ಪಡೆದ ಅವರು, 'ದಾನಶೂರ ಕರ್ಣ', 'ಶಕುನಿ', 'ಅಶ್ವತ್ಥಾಮ' ಮುಂತಾದ ಪಾತ್ರಗಳಲ್ಲಿ ಕಲಾ ರಸಿಕರ ಮೆಚ್ಚುಗೆ ಗಳಿಸಿದರು. ಅವರ 'ಶಾಕುಂತಲಾ' ರೂಪಕವನ್ನು ಖ್ಯಾತ ರಂಗಕರ್ಮಿ ಶ್ರೀ ಜಿ.ಸಿ. ಶೇಖರ್ 1995ರಲ್ಲಿ ನಾಟಕವನ್ನಾಗಿ ರೂಪಾಂತರಿಸಿ, ಭರ್ಜರಿ ಪ್ರದರ್ಶನ ನೀಡಿದರು.
ಸಾಹಿತ್ಯ, ರಂಗಭೂಮಿ, ರಾಜಕಾರಣ, ಮತ್ತು ಶಿಕ್ಷಣದಲ್ಲಿ ಬಹುಮುಖ ಪ್ರತಿಭೆಯೊಂದಿಗೆ, ವೆಂಕಣ್ಣಾಚಾರ್ಯರು ಕನ್ನಡ ಸಾರಸ್ವತ ಲೋಕಕ್ಕೆ ಮೌಲ್ಯಯುತ ಕೊಡುಗೆಯನ್ನು ನೀಡಿದ್ದಾರೆ..