ಯಲ್ಲಾಪುರ : ಯಲ್ಲಾಪುರ ಪಟ್ಟಣದಲ್ಲಿ ಮನುಷ್ಯರೊಂದಿಗೆ ಮಂಗಗಳು ಕೂಡ ವಾಸ್ತವ ಮಾಡುತ್ತಿದ್ದು 200 -300 ರಷ್ಟು ಮಂಗಗಳು ಜನ ವಾಸ್ತವ್ಯ ಮಾಡುವ ಮನೆಯ ಮೇಲೆ ವಾಸ ಮಾಡಿಕೊಂಡಿವೆ. ಬೆಳಿಗ್ಗೆ ಕಾಡಿಗೆ ಆಹಾರ ಅರಿಸಿ ಹೋಗುವ ಮಾರ್ಗ ಮಧ್ಯ ವಿದ್ಯುತ್ ಕಂಬಗಳು, ಹೈಟೆನ್ಷನ್ ವೈರ್ ಗಳ ಮೇಲೆ ಸಂಚರಿಸಿ ಮಂಗಗಳು ವಿದ್ಯುತ್ ಸ್ಪರ್ಶದಿಂದಾಗಿ ಸ್ಥಾವನಪ್ಪುತ್ತಿವೆ.
ಪಟ್ಟಣದ ಐಬಿ ರಸ್ತೆಯ ವೆಂಕಟರಮಣ ಮಠದ ಹಿಂಬದಿಯ ಟ್ರಾನ್ಸ್ಫಾರ್ಮರ್ ಮೇಲೆ ಸೋಮವಾರ ಮಂಗ ಒಂದು ವಿದ್ಯುತ್ ಸಂಪರ್ಕಕ್ಕೆ ಬಂದು ಟ್ರಾನ್ಸ್ಫರ್ ಮೇಲೆ ಸುಟ್ಟು ಬಿದ್ದಿತ್ತು. ಮಂಗನ ದೇಹದಿಂದ ಹೊಗೆ ಹೊರಡುತ್ತಿರುವ ಕಾರಣಕ್ಕೆ ಸ್ಥಳೀಯರು ಹೆಸ್ಕಾಂಗೆ ಕರೆ ಮಾಡಿ ಟ್ರಾನ್ಸಸ್ಪರ್ ಮೇಲೆ ಮಂಗ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.
ಯಲ್ಲಾಪುರ ಪಟ್ಟಣದ ತಾರಸಿ ಮನೆ ಮೇಲಿನ ಜಿಐ ಶೆಡ್ ಕೆಳಗೆ ನೆಲೆ ಕಂಡುಕೊಂಡಿರುವ ಕೆಂಪು ಮತ್ತು ಕಪ್ಪು ಮುಖದ ಮಂಗಗಳ ಗುಂಪುಗಳಿಗೆ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಜಿಐ ಶೆಡ್ ರಕ್ಷಣೆ ಒದಗಿಸುತ್ತದೆ. ಅಲ್ಲದೆ ಮನೆಯ ಮೇಲಿನ ನೀರಿನ ತೊಟ್ಟಿ, ಸಿಂಟೆಕ್ಸ್ ಟ್ಯಾಂಕ್ ನೀರಿನ ದಾಹವನ್ನು ತಣಿಸುವುದಲ್ಲದೇ, ಟ್ಯಾಂಕ್‌ಗಳ ಮುಚ್ಚಳ ತೆರೆದಿದ್ದಾಗ ದೊಡ್ಡ ಮಂಗ ಮತ್ತು ಸಣ್ಣ ಮಂಗಗಳ ಮರಿಗಳಿಗೆ ಸ್ನಾನ ಗ್ರಹವಾಗಿ ಪರಿವರ್ತನೆಯಾಗುತ್ತದೆ. ಅದರಲ್ಲಿಯೂ ಬೇಸಿಗೆಯಲ್ಲಿ ಮಂಗಗಳು ಟಾಕಿಯಲ್ಲಿ ಇಳಿದು ಈಸಿ ಕುಣಿದು ಕುಪ್ಪಳಿಸುತ್ತವೆ.
ಆಯ್ದ ಮನೆಯ ತಾರಸಿಯ ಶೆಡ್ ನಲ್ಲಿಯು 15 ರಿಂದ 30 ಮಂಗಗಳ ಗುಂಪು ನೆಲೆ ಕಂಡುಕೊಂಡಿದ್ದು, ಈ ಗುಂಪಿಗೆ ಒಂದು ಗಂಡು ಮಂಗ ನಿಯಂತ್ರಿಸುತ್ತಿರುತ್ತದೆ. ಬೆಳಿಗ್ಗೆ ಆದೊಡನೆ ಆಹಾರ ಅರಸುತ್ತಾ ಅರಣ್ಯದ ಕಡೆಗೆ ಮುಖ ಮಾಡುವ ಮಂಗಗಳು, ದಾರಿ ಮಧ್ಯದಲ್ಲಿ ಸಿಗುವ ಕಸದ ತೊಟ್ಟಿಗಳಲ್ಲಿ ತೆರೆದ ಮನೆಯ ಗಿಡಗಳಿಂದ ಒಳಗೆ ತೆರಳಿ ಹಂಚು ತೆಗೆದು ಮನೆಯ ಒಳಗೆ ಪ್ರವೇಶಿಸಿ ಆಹಾರವನ್ನು ಕಳ್ಳತನ ಮಾಡುತ್ತವೆ. ಕಸದ ತೊಟ್ಟಿಯಲ್ಲಿ ಸಿಗುವ ವಿಷಭರಿತ ಆಹಾರವನ್ನು ಸೇವಿಸಿ ಆಗಾಗ ಮಂಗಗಳು ಸಾವನ್ನಪ್ಪುವುದನ್ನು ಕಾಣಬಹುದು. ಕೆಲವೊಂದು ಕಿರಾಣಿ ಅಂಗಡಿಕಾರರು ಹೋಟೆಲ್ ನಡೆಸುವವರು ತಮ್ಮ ಅಂಗಡಿಯಲ್ಲಿ ಆಹಾರದೊಂದಿಗೆ ವಿಷವನ್ನು ಕೂಡ ಸೇರಿಸಿ ಇಲಿಗಳಿಗಾಗಿ ಇಟ್ಟಿರುತ್ತಾರೆ. ಇಂತಹ ಉಳಿದ ಭಾಗವನ್ನು ಕಸದ ತೊಟ್ಟಿಯಲ್ಲಿ ಹಾಕುವುದರಿಂದ ಏನೂ ಅರಿಯದ ಮಂಗಗಳು ತಿಂದು ಸಾವನ್ನಪ್ಪಿವೆ. ಅಷ್ಟೇ ಅಲ್ಲದೆ ವಿದ್ಯುತ್ ತಂತಿಗಳು ಇಂಟರ್ನೆಟ್ ಕೇಬಲ್, ಟಿವಿ ಕೇಬಲ್ಗಳ ಮೇಲೆ ವಿದ್ಯುತ್ ಕಂಬ ಮರಗಳ ಮೇಲೆ ಸಂಚರಿಸುವಾಗ ವಿದ್ಯುತ್ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿವೆ.
ಈ ಎಲ್ಲ ಅಪಾಯಗಳಿಂದ ಮಂಗಗಳನ್ನು ಪಾರು ಮಾಡಬೇಕಾದ ಅರಣ್ಯ ಇಲಾಖೆ ಮಾತ್ರ ಜಾಣ ಕಿವುಡುತನ ತೋರಿಸುತ್ತಿದೆ. ಸಾರ್ವಜನಿಕರು ಎಷ್ಟೇ ಹೇಳಿದರೂ ಕೂಡ ಮಂಗಗಳನ್ನು ದಟ್ಟ ಅರಣ್ಯಕ್ಕೆ ಕಳಿಸುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಮಂಗ ಮುಂತಾದ ಮರವಾಸಿ ಪ್ರಾಣಿಗಳು ಅರಣ್ಯದ ಮರ ಗಿಡಗಳಲ್ಲಿ ಹಣ್ಣು ಕಾಯಿಗಳನ್ನು ಹುಡುಕಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳದ ಬೇಕಾದ ಪ್ರಾಣಿಗಳಾಗಿವೆ. ಈ ಪ್ರಾಣಿಗಳು ತಿನ್ನುವ ಆಹಾರವನ್ನು ಟೆಂಡರ್ ಕರೆದು ಗುತ್ತಿಗೆ ನೀಡಿ ಅರಣ್ಯ ಇಲಾಖೆ ಮೂಖ ಪ್ರಾಣಿಗಳ ಆಹಾರವನ್ನು ಕೂಡ ಕಸಿದುಕೊಂಡು ಹಣ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ಅನಿವಾರ್ಯತೆಯಿಂದ ಅರಣ್ಯದಿಂದ ಮಂಗಗಳು ಆಹಾರ ಹುಡುಕುತ್ತಾ ಪಟ್ಟಣದ ಕಡೆಗೆ ಬರುತ್ತಿದ್ದು, ಇದರಿಂದ ಸಾರ್ವಜನಿಕ ಕಿರುಕುಳ ಹೆಚ್ಚಾಗುತ್ತಿದೆ.