ಯಲ್ಲಾಪುರ: ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ "ಸಾರ್ವಜನಿಕರಿಗೆ ಮಾಹಿತಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ" ಸಭೆ ಹಲವು ಪ್ರಶ್ನೆಗಳಿಗೆ ಹುಟ್ಟಿ ಹಾಕಿತು.
ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ ಅವರು ಸಭೆಯಲ್ಲಿ ಹಲವು ಸಮಸ್ಯೆಗಳ ಪ್ರಸ್ತಾಪಿಸಿ, ಅಧಿಕಾರಿಗಳ ಜವಾಬ್ಧಾರಿ ಬಗ್ಗೆ ಮಾತನಾಡಿದರು. "ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ವಿಸ್ತಾರದ ಕುರಿತಂತೆ ನಿಯಮ ಪಾಲನೆಯಾಗುತ್ತಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಲ್ಲಾಪುರ ಪಟ್ಟಣದ ಮಧ್ಯ ಭಾಗದಲ್ಲಿ "ಕೆಲವು ವರ್ಷದ ಹಿಂದೆ ಜವಾಬ್ದಾರಿಯುತ ಇಲಾಖೆಯ ಕಚೇರಿ ವಿಸ್ತರಣೆಗಾಗಿಯೇ ರಾಷ್ಟ್ರೀಯ ಹೆದ್ದಾರಿಯನ್ನು ಅತಿಕ್ರಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಂಚಿನವರೆಗೆ ಅತಿಕ್ರಮಣ ಮಾಡಿದವರಿಗೆ ಪಟ್ಟಣ ಪಂಚಾಯಿತಿ ಎಲ್ಲ ರೀತಿಯ ಪರವಾನಿಗೆ ಹಾಗೂ ಸೌಲಭ್ಯ ನೀಡುತ್ತಿದೆ. ಸಾರ್ವಜನಿಕರು ಸರ್ಕಾರಿ ಆಸ್ತಿಗಳ ರಕ್ಷಣೆಗೆ ಅಧಿಕಾರಿಗಳಿಗೆ ಲಿಖೀತ ಅರ್ಜಿ ನೀಡಬೇಕಾಗಿದೆ. ಹಾಗಾದರೇ, "ಸರಕಾರಿ ಜಮೀನನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಯಾರದು, ಖಾಸಗಿಯವರು ಅಕ್ರಮ ಸಂಬಂಧಿಸಿದಂತೆ ಅಧಿಕಾರಿಗಳಿಗೆ ದೂರು ನೀಡಬೇಕಾ, ಹಾಗಿದ್ದರೆ, ಅಧಿಕಾರಿಗಳ ಕರ್ತವ್ಯ ಏನಿದೆ ಎಂದು ಲೋಕಾಯುಕ್ತರಿಗೆ ಪ್ರಶ್ನಿಸಿದರು.
ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರು ಮಾತನಾಡಿ, "ಯಾವುದೇ ಸರಕಾರಿ ಕಚೇರಿ ನಿರ್ವಹಣೆ ಮಾಡಬೇಕಾದರೆ ಅದಕ್ಕಾಗಿಯೇ ಸರ್ಕಾರದ ನಿಯಮಗಳು ಇವೆ. ಅರ್ಜಿಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸರಿಯಾದ ಹಿಂಬರಹದೊಂದಿಗೆ ಸಂಗ್ರಹಿಸಬೇಕು. ನಿಮ್ಮ ಕರ್ತವ್ಯ ಅರಿತು ನೀವು ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇಕು. ಅಲ್ಲದೆ, "ಯಾವುದೇ ಅರ್ಜಿಗೆ ಸಂಬಂಧಿಸಿದಂತೆ, ತಕ್ಷಣದಲ್ಲಿ ಅದನ್ನು ಬಗೆಹರಿಸಬೇಕು. ಅದಾಗದಿದ್ದರೆ, ಅರ್ಜಿದಾರರಿಗೆ ಯಾವ ಕಾರಣಕ್ಕೆ ಸಮಸ್ಯೆ ಬಗೆಹರಿಸಲಾಗಲಿಲ್ಲ ಎಂಬುದರ ಬಗ್ಗೆ ಹಿಂಬರಹ ನೀಡಬೇಕು," ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. "ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಯಂತ್ರಣ ನಮ್ಮ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಪ್ಪುಗಳನ್ನು ನಾವು ಪೂರಕ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸುತ್ತೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ," ಎಂದು ಸ್ಪಷ್ಟನೆ ನೀಡಿದರು.
ಕಂದಾಯ ಇಲಾಖೆಯಿಂದ ಮಂಜೂರಾದ ಜಾಗೆಯನ್ನು ಶರ್ತು ಉಲ್ಲಂಘಿಸಿ, ಕ್ರಯದಸ್ತ (ಕ್ರಯ ದಾಖಲೆ) ನೊಂದಣಿ ಮಾಡಲಾಗಿದೆ, ಹೀಗಾಗಿ ಸೋ ಮೊಟೊ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಎಸ್.ಪಿಯವರಿಗೆ ಯಲ್ಲಾಪುರದಲ್ಲಿ ಮಂಜುನಾಥ, ವಿ. ಹೆಗಡೆ ಮತ್ತು ಅಬ್ದುಲ್ ರೆಹಮಾನ್ ಶೇಖ್ ಹಸನ್ ಅವರು, ಮನವಿ ನೀಡಿದರು. ಯಲ್ಲಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ. 4A1A1A1 GR 542ರ ಅಡಿಯಲ್ಲಿ, ಕಂದಾಯ ಇಲಾಖೆಯಿಂದ ಮಂಜೂರಾದ ಜಾಗೆಯನ್ನು ಶರ್ತಿನ ಪ್ರಕಾರ ಪಾಲಿಸದೇ, ಕ್ರಯದಸ್ತವನ್ನು ನೊಂದಣಿ ಪಡಿಸಲಾಗಿದೆ. ಈ ಕೃತ್ಯವನ್ನು ತಹಶೀಲ್ದಾರರ ಕಚೇರಿ ಹಾಗೂ ಪ.ಪಂ ತಿರಸ್ಕರಿಸಿದೆ. ಅಲ್ಲದೆ, ಪಿ.ಆಯ್.ಡಿ. ನಂ. 14-6-64ಯಲ್ಲಿರುವ ಸರ್ವೇ ನಂ. 5-GR ಹತ್ತಿರದ ಜಾಗೆಯ ಮಾರಾಟ ನೋಂದಣಿ ವೇಳೆ ಕೂಡಾ ನಿಯಮ ಉಲ್ಲಂಘನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ, ಈ ಶರ್ತಿನ ಉಲ್ಲಂಘನೆ ಮತ್ತು ಕಾನೂನು ಬಾಹಿರ ನೋಂದಣಿಯನ್ನು ಗಂಭೀರವಾಗಿ ಪರಿಗಣಿಸಲು, ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಲೋಕಾಯುಕ್ತರಿಗೆ ಹೆಗಡೆ ಹಾಗೂ ಶೇಖ ಹಸನ್ ವಿನಂತಿಸಿದರು.
ಲೋಕಾಯುಕ್ತರ ಸಭೆಯ ಉದ್ದೇಶ ಸಾರ್ವಜನಿಕರಿಂದ ಮಾಹಿತಿಗಳನ್ನು ನೀಡುವುದಾಗಿದ್ದರೂ, ತಕರಾರುಗಳನ್ನು ಆಲಿಸುವುದು ಎಂದು ಘೋಷಿಸಲಾದರೂ, ಜನಸಾಮಾನ್ಯರು ಹಾಗೂ ಮಾಧ್ಯಮದವರಿಗೆ ಈ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಲೋಕಾಯಕ್ತರಿಗೆ ನೀಡಲು ನೂರಾರು ದೂರುಗಳಿದ್ದರೂ ಮಾಹಿತಿ ಕೊರತೆಯಿಂದ ಕೇವಲ ಆರರಿಂದ ಏಳು ಜನ ಮಾತ್ರ ದೂರು ನೀಡುವಂತಾಗಿತ್ತು.
ಸಭೆಯಲ್ಲಿ ಪ್ರಭಾರೆ ಡಿವೈಎಸ್‌ಪಿ ವಿನಾಯಕ ಬಿಲ್ಲವ್ , ಲೋಕಾಯುಕ್ತ ಇನ್ಸಪೇಕ್ಟರ್ ಪ್ರಸಾದ ಪನ್ನೇಕರ. ಯಲ್ಲಾಪುರ ತಹಶೀಲ್ದಾರ ಅಶೋಕ ಭಟ್ಟ, ತಾ.ಪಂ ಪ್ರಭಾರೆ ಇಓ ಮತ್ತು ಬಿಇಓ ಎನ್ ಆರ್ ಹೆಗಡೆ, ಪಿಐ ರಮೇಶ ಹಾನಾಪುರ, ಎಸಿಎಫ್ ಹಿಮವತಿ ಭಟ್ಟ, ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಜಿ.ಪಂ ಇಂ.ಸ.ಕಾ.ನಿ ಇಂ. ಅಶೋಕ ಬಂಟ್, ಪಿಡಬ್ಲ್ಯೂಡಿ ಸಹಾಯಕ ಎಂಜಿನೀಯರ್ ವಿಶಾಲ ಕಟಾವಕರ, ಹಿಂದುಳಿದ ವರ್ಗದ ಇಲಾಖಾ ಅಧಿಕಾರಿ ದಾಕ್ಷಾಯಣಿ ನಾಯ್ಕ, ಪ.ಪಂ ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ಟ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.