ಯಲ್ಲಾಪುರ: ಶಿರಸಿ ತಾಲ್ಲೂಕಿನ ಬಿಳೂರ ಗ್ರಾಮದ ರೈತ ಮಂಜುನಾಥ ನಾಯ್ಕ ಎಂಬುವವರು ಯಲ್ಲಾಪುರ ಟಿಎಸ್ಎಸ್ ಅಡಿಕೆ ವ್ಯವಹಾರದಲ್ಲಿ ದೊಡ್ಡ ಮಟ್ಟದ ಮೋಸವಾಗಿದೆಯೆಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಿಳೂರ ಮತ್ತು ಉಲ್ಲಾಳಕೊಪ್ಪದ ಕೆಲವು ರೈತರು ಕೂಡಾ ಸಾಕ್ಷಿಗಳಾಗಿ ಬೆಂಬಲ ನೀಡಿದ್ದಾರೆ.
ಶಿರಸಿ ಬಿಳೂರು ಗ್ರಾಮದ ಮಂಜುನಾಥ ಲಕ್ಷ್ಮಣ ನಾಯ್ಕ, ಈಶ್ವರ ಫಕೀರಪ್ಪ ನಾಯ್ಕ, ಈರಪ್ಪ ನಾಗೇಶ ನಾಯ್ಕ ಮತ್ತು ಶಿರಸಿ ಉಲ್ಲಾಳಕೊಪ್ಪದ ಶ್ರೀಧರ ಭಟ್ಟ ಎಂಬ ನಾಲ್ಕು ರೈತರು ತಮ್ಮ ಅಡಿಕೆಯನ್ನು ಹರಾಜು ಹಾಕಲು 2024ರ ಜುಲೈ 22ರಂದು ಯಲ್ಲಾಪುರ ಟಿ.ಎಸ್.ಎಸ್ ಶಾಖೆಗೆ ಬಂದಿದ್ದರು. ಹರಾಜು ಪ್ರಕ್ರಿಯೆಯು ಬೆಳಗ್ಗೆ 10:00ರಿಂದ ಸಂಜೆ 5:00ರವರೆಗೆ ನಡೆದಿತ್ತು. ಈ ಸಂದರ್ಭದಲ್ಲಿ, ಅಡಿಕೆ ಲಾಟ ಸಂಖ್ಯೆ 30, 35, ಮತ್ತು 36ವನ್ನು ಹರಾಜಿಗೆ ಹಾಕಲಾಗಿತ್ತು. ಲಾಟ 30ರಲ್ಲಿ 18,876 ರೂ ಗೆ ಹರಾಜು ಆಗಿದ್ದು, ನಂತರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಆರೋಪಿಗಳು 12,899 ರೂ ಎಂದು ತಿದ್ದುಪಡಿ ಮಾಡಿ, ಮೋಸದ ಮೂಲಕ ವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಈ ಪ್ರಕರಣದಲ್ಲಿ ಗೋಪಾಲಕೃಷ್ಣ ಮತ್ತಿಗಟ್ಟ, ಸಂತೋಷ ಹಳವಳ್ಳಿ, ಕೃಷ್ಣ ಜೂಜಿನಬೈಲ್, ಗಿರೀಶ ಶಿರಸಿ ಮತ್ತು ರವಿ ಚಿಪಗಿ ಎಂಬ ಐವರ ವಿರುದ್ಧ ದೂರು ದಾಖಲಾಗಿದೆ.
ಈ ಘಟನೆ ಕುರಿತು ರೈತ ಒಕ್ಕೂಟದ ಜೊತೆ ಚರ್ಚಿಸಿ ದೂರು ನೀಡಲು ವಿಳಂಭವಾಗಿರುವ ಬಗ್ಗೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.