ಯಲ್ಲಾಪುರ : ಯಲ್ಲಾಪುರ ಪಟ್ಟಣ ಪಂಚಾಯತ ಪೌರಕಾರ್ಮಿಕ 56 ವರ್ಷದ ಲಕ್ಷ್ಮಣ ಆಯಿತ್ರ ಹರಿಜನ ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಸಾವನಪ್ಪಿದ್ದಾರೆ
ಪಟ್ಟಣದ ಬೆಲ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಹೃದಯಘಾತ ಸಂಭವಿಸಿದೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರನ್ನು ಪರೀಕ್ಷಿಸಿದಾಗ ತೀವ್ರ ಹೃದಯಘಾತ ಆಗಿದೆ ಎಂದು ತಿಳಿದುಬಂದಿದೆ. ಕೂಡಲೇ ತಾಲೂಕ ಆಸ್ಪತ್ರೆಗೆ ಸೇರಿಸುವಂತೆ ಖಾಸಗಿ ವೈದ್ಯರು ಸೂಚನೆ ನೀಡಿದ್ದಾರೆ. ತಾಲೂಕು ಆಸ್ಪತ್ರೆಗೆ ಸೇರಿಸುವ ಪೂರ್ವದಲ್ಲಿಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಅತ್ಯಂತ ಶಾಂತ ಸ್ವಭಾವದ ಲಕ್ಷ್ಮಣ್ ಹರಿಜನ್, ತಮ್ಮ ಸಹಪೌರಕಾರ್ಮಿಕರೊಂದಿಗೆ ಉತ್ತಮವಾದ ಸ್ನೇಹಮಯ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಹಲವಾರು ಜನರ ಮನ ಗೆದ್ದಿದ್ದರು. ಸೋಮವಾರ ತಲೆ ಸುತ್ತಿ ನೆಲಕ್ಕೆ ಉರುಳಿದ್ದ ಲಕ್ಷ್ಮಣ್ ಹರಿಜನ್ ಅವರ ನಡುವಳಿಕೆ ಒಂದು ಹಾಸ್ಯದ ಭಾಗ ಎಂದು ಭಾವಿಸಲಾಗಿತ್ತು. ಆದರೂ ಕೂಡ ಸಂಶಯಗೊಂಡ ಇನ್ನಿತರರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು.
ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಘಟನೆ ವಿಷಯ ತಿಳಿದ ತಕ್ಷಣ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಮೃತ ಲಕ್ಷ್ಮಣ ಆಯಿತ್ರ ಹರಿಜನ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ ಇನ್ನಿತರರು ಇದ್ದರು.