ಯಲ್ಲಾಪುರ: ಮುಂಗಾರು ಮಳೆಗಾಲದ ಅತಿವೃಷ್ಟಿಯಿಂದಾಗಿ ಯಲ್ಲಾಪುರ ತಾಲೂಕಿನ ಮದನೂರು, ಕಿರವತ್ತಿ ಮತ್ತು ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ಅಪಾರ ಹಾನಿಯಾಗಿದೆ. ನೆಟ್ಟಿ ಕಾರ್ಯ ಬಹುತೇಕ ಸ್ಥಗಿತಗೊಂಡಿದ್ದು, ನೇಟಿ ಮಾಡಿದ್ದ ಬೆಳೆ ಕೊಳೆಯುತ್ತಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ರೈತರ ಜೀವನೋಪಾಯಕ್ಕೆ ಬಹುದೊಡ್ಡ ಸವಾಲು ಎದುರಾಗಿದೆ.
ಹುಣಶೆಟ್ಟಿಕೊಪ್ಪ ಗ್ರಾಮದ ರೈತ ಹಾಗೂ ಮದನೂರು ಶ್ರೀ ಗ್ರಾಮದೇವಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ದೇಸಾಯಿ ಈ ಸಂಬಂಧ ಮಾತನಾಡಿ, "ಹಿಂದಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ನೇಟಿ ಬೆಳೆ ಹಾನಿಯಾದಾಗ ಸರ್ಕಾರ ಪರಿಹಾರ ನೀಡುತ್ತಿತ್ತು. ಆದರೆ, ಈ ಬಾರಿ ಪರಿಹಾರದ ನಿರೀಕ್ಷೆ ಕಡಿಮೆ ಇದೆ," ಎಂದು ಆತಂಕ ವ್ಯಕ್ತಪಡಿಸಿದರು. "ಅತಿವೃಷ್ಟಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು" ಎಂದು ಆಗ್ರಹಿಸಿದರು. ಅವರಂತೆಯೇ ಹಲವಾರು ರೈತರು ತಮ್ಮ ಜೀವನೋಪಾಯಕ್ಕೆ ಭತ್ತದ ಬೆಳೆಯೇ ಆಧಾರವಾಗಿದ್ದು, ಈ ಅನಿರೀಕ್ಷಿತ ನಷ್ಟದಿಂದಾಗಿ ಮುಂದಿನ ದಿನಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
"ನೇಟಿ ಮಾಡಿದ ಭತ್ತದ ಸಸಿಗಳು ಕೊಳೆತು ಹೋಗುವ ಹಾನಿ ಒಂದೆಡೆಯಾದರೆ, ಅತಿವೃಷ್ಟಿಯಿಂದಾಗಿ ಮಣ್ಣಿನಲ್ಲಿನ ಪೋಷಕಾಂಶಗಳು ಕೊಚ್ಚಿ ಹೋಗಿರುವುದರಿಂದ ಮುಂದಿನ ಬೆಳೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ,"ಎಂದು ರೈತರು ಆತಂಕಿತರಾಗಿದ್ದಾರೆ.
ಈ ಸಂಬಂಧ ಸರ್ಕಾರದ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. ಸರ್ಕಾರದ ಪ್ರತಿನಿಧಿಗಳು ಅಥವಾ ಇಲಾಖೆಯ ಅಧಿಕಾರಿಗಳು ತಕ್ಷಣ ಜಾಗೃತರಾಗಿ,
ರೈತರ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ವಜ್ರಳ್ಳಿ, ಕಳಚೆ ಭಾಗದಲ್ಲಿ ಅಡಿಕೆ ಕೊಳೆ ರೋಗ ಹಾಗೂ ಹುಣಶೆಟ್ಟಿಕೊಪ್ಪ ಭಾಗದಲ್ಲಿ ಭತ್ತದ ನಾಟಿ ಸಸಿಗಳು ಕೊಳೆತು ರೈತರ ಪ್ರಯೋಜನಕ್ಕೆ ಬಾರದಿರುವುದು ಇಲ್ಲಿಯ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎತ್ತಿ ತೋರಿಸುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರದ ಪ್ರತಿನಿಧಿಗಳು, ರೈತ ವರ್ಗಗಳ ಸಮಸ್ಯೆಯನ್ನು ಪ್ರತ್ಯಕ್ಷ ಕಂಡು ನಿವಾರಿಸಬೇಕಾಗಿದೆ.