ಯಲ್ಲಾಪುರ : ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಮೂರು ಕಡತಗಳ ಕಳ್ಳತನದ ಘಟನೆ ಸಂಭವಿಸಿದೆ ಎಂದು ವದಂತಿ ಹಬ್ಬಿದೆ. ಈ ಕಳ್ಳತನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದ್ದರೂ, ಕ್ಯಾಮೆರಾ ಪೂಟೇಜ್ ಅಳಿಸಲ್ಪಟ್ಟಿದೆ ಎಂದು ಕೂಡ ಹೇಳಲಾಗುತ್ತಿದೆ.
ಪಟ್ಟಣ ಪಂಚಾಯತಿಯು ಹಲವಾರು ವ್ಯವಹಾರಗಳಿಗೆ ಸಂಬಂಧಿಸಿದಂತೆ ಉತ್ತಮ ಹೆಸರು ಪಡೆದಿಲ್ಲ, ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ದರ್ಬಾರ್ ಹೆಚ್ಚಾಗಿದೆ ಎನ್ನಲಾಗುತ್ತಿದೆ. ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಕಳ್ಳತನದ ಹಿಂದೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ಕೈವಾಡ ಇರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಭೂ ದಾಖಲೆಯ ಕಡತಗಳ ಕಾಣೆಯಾದ ದಾಖಲೆಗಳನ್ನು ಪತ್ತೆ ಹಚ್ಚಲು ಜಿಲ್ಲೆಯ ಹಿರಿಯ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಬೇಕಿದೆ. ಈ ತನಿಖೆಯಿಂದ ಇನ್ನಷ್ಟು ಅವ್ಯವಹಾರಗಳು ಹೊರಬರುವ ಸಾಧ್ಯತೆ ಇದೆ.
ಸಿಸಿಟಿವಿ ಕ್ಯಾಮೆರಾಗಳು ಕಚೇರಿಯಲ್ಲಿ ಸ್ಥಾಪಿಸಲ್ಪಟ್ಟಿದ್ದರೂ, ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದು ಸಂಶಯಾಸ್ಪದವಾಗಿದೆ. ಕಚೇರಿಗೆ ಯಾರು ಯಾವಾಗ ಎಲ್ಲಿ ಹೇಗೆ ಪ್ರವೇಶಿಸಿದರು ಮತ್ತು ಹೊರಗೆ ಹೋದರು ಎಂಬುದರ ಕುರಿತು ಖಚಿತವಾದ ಮಾಹಿತಿ ಲಭ್ಯವಿಲ್ಲ.
ಈ ಕುರಿತು ದೂರವಾಣಿಯ ಮೂಲಕ ಯಲ್ಲಾಪುರ ನ್ಯೂಸ್ ಜೊತೆ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸುನಿಲ್ ಗಾವಡೆ, ತಾವು ಶನಿವಾರ ಬೆಳಿಗ್ಗೆ ಹುಬ್ಬಳ್ಳಿಯ ಇಲಾಖೆಯ ಮೀಟಿಂಗ್ ಒಂದರಲ್ಲಿ ಭಾಗಿಯಾಗಿದ್ದು ವಿಷಯ ಈಗಷ್ಟೇ ತಿಳಿದು ಬಂದಿದೆ. ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ನಾನು ಬಲ್ಲಾಪುರ ಕಚೇರಿಗೆ ಬರುತ್ತಿದ್ದೇನೆ. ಸಿಸಿಟಿವಿ ಕ್ಯಾಮೆರಾ ಪೂಟೇಜ್ ನಾನು ಕಚೇರಿಗೆ ಬಂದ ನಂತರವೇ, ನೋಡಬೇಕಾಗಿದ್ದು, ಅಂತಹ ಯಾವುದೇ ಸಂಶಯ ಆಸ್ಪದ ಚಟುವಟಿಕೆಗಳು ಕಂಡುಬಂದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದರು.
ಕಡತಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪಟ್ಟಣದಲ್ಲಿ ಶನಿವಾರ ಹಬ್ಬಿರುವ ಈ ವದಂತಿ ಸತ್ಯವೂ ಆಗಿರಬಹುದು ಅಥವಾ ಸುಳ್ಳು ಆಗಿರಬಹುದು, ಏನೇ ಆದರೂ ಕೂಡ ಪಟ್ಟಣ ಪಂಚಾಯಿತಿ ಸಂಬಂಧಿಸಿದ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿ, ಸಿಸಿ ಕ್ಯಾಮೆರಾ ಪೋಟೇಜ್ ಗಳನ್ನು ಅಳಿಸದಂತೆ, (ಅಳಿಸಿದಾಗಲೂ ಕೂಡ, ವಿಧಿ ವಿಜ್ಞಾನ ಪ್ರಯೋಗಾಲಯದವರು ಪೂಟೇಜ್ ರಿಟ್ರೀವ್ ಮಾಡುತ್ತಾರೆ) ಈ ಸಂಶಯಾಸ್ಪದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ತನಿಖೆಗೆ ಒಪ್ಪಿಸಬೇಕಾಗಿದೆ.