ಯಲ್ಲಾಪುರ: ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಪಟ್ಟಣ ಪಂಚಾಯಿತಿಯ ಅಲ್ಪಸಂಖ್ಯಾತ ಸದಸ್ಯ ಕೈಸರ್ ಸಯ್ಯದಲಿ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ಬ ಮಹಿಳಾ ಮೀಸಲಾತಿ ಬಂದಿದ್ದು, ಎಲ್ಲ ಮಹಿಳಾ ಸದಸ್ಯರಲ್ಲಿ ಹಿಂ.ಬ ವರ್ಗದ ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣ ಬೇರೆ ವರ್ಗಕ್ಕೆ ಮೀಸಲಾತಿ ಬರಬಹುದಾಗಿದೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿ ಇದ್ದರೂ, ಪಟ್ಟಣದಲ್ಲಿ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಾತಿನಿಧಿತ್ವ ದೊರೆತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪಟ್ಟಣ ಪಂಚಾಯಿತಿಯ ಒಬ್ಬರ ಸಾವಿನ ನಂತರ ಉಳಿದ ಒಟ್ಟು 18 ಸದಸ್ಯರಲ್ಲಿ, ಕೈಸರ್ ಸಯ್ಯದಲ್ಲಿ ಅಬ್ದುಲ್ ಅಲಿ ಹಾಗೂ ಹಲಿಮಾ ಕಕ್ಕರೆ ನಾವು ಮೂವರು ಅಲ್ಪಸಂಖ್ಯಾತರಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮಲ್ಲಿ ಒಬ್ಬರಿಗೆ ಅವಕಾಶ ನೀಡುವಂತೆ, ಮಾಧ್ಯಮದ ಮೂಲಕ ಕಾಂಗ್ರೆಸ್ ಪಕ್ಷದ ಪ್ರಮುಖರಿಗೂ ಹಾಗೂ ಇನ್ನಿತರ ಪ.ಪಂ ಸದಸ್ಯರಿಗೆ ಕೈಸರ್ ಸಯ್ಯದಲಿ ವಿನಂತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಂ.ಡಿ. ಮುಲ್ಲಾ ಅಧ್ಯಕ್ಷರಾದ ನಂತರ, ಪಟ್ಟಣ ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಯಾವುದೇ ಹುದ್ದೆ ಸಿಕ್ಕಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಹಳೆಯ ಕಾಂಗ್ರೆಸ್ ಮತ್ತು ಹೊಸ ಕಾಂಗ್ರೆಸ್ ಪಕ್ಷದ ಪ್ರಮುಖರು, ಅಲ್ಪಸಂಖ್ಯಾತ ಸಮುದಾಯದ ಆಕಾಂಕ್ಷೆಗಳನ್ನು ಗಮನಿಸಿ, ಉಪಾಧ್ಯಕ್ಷ ಸ್ಥಾನವನ್ನು ಅವರಿಗೆ ಬಿಟ್ಟುಕೊಡುವ ಮೂಲಕ ಪ್ರಾತಿನಿಧ್ಯ ನೀಡಬೇಕೆಂದು ಕೈಸರ್ ಸಯ್ಯದಲಿ ಒತ್ತಾಯಿಸಿದ್ದಾರೆ.