Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Friday, 9 August 2024

ಯಲ್ಲಾಪುರದ ಇಬ್ಬರು, ಜಿಲ್ಲೆಯ ಒಬ್ಬರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ


ವರದಿ : ಜಗದೀಶ ನಾಯಕ
ಯಲ್ಲಾಪುರ : ಕರ್ನಾಟಕ ನಾಟಕ ಅಕಾಡೆಮಿ ಈ ವರ್ಷದ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ನಾಟಕ ಕ್ಷೇತ್ರದಲ್ಲಿ ಮಂಜುನಾಥ ತಿಮ್ಮಣ್ಣ ಭಟ್, ಹವ್ಯಾಸಿ ರಂಗಭೂಮಿಯ ಕಲೆಗೆ ಸುರೇಶ ಸಿದ್ದಿ ಹಾಗೂ ರಂಗಭೂಮಿಯ ದಿಗ್ಗಜೆಯಾಗಿ ಬೆಳಗಿದ ಸಾಧಕಿ ಯಲ್ಲಾಪೂರದ ಗಿರೀಜಾ ಸಿದ್ದಿ ಇವರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ. ಮೂವರು ಸಾಧಕರನ್ನು ಪರಿಚಯಿಸುವ ಸಣ್ಣ ಪ್ರಯತ್ನ ಯಲ್ಲಾಪುರ‌ ನ್ಯೂಸ್ ನಿಂದ.
 
ನಾಟಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಂಜುನಾಥ ತಿಮ್ಮಣ್ಣ ಭಟ್ಟರ ಕೊಡುಗೆ: 33 ವರ್ಷಗಳ ಸೇವೆ
ಮಂಜುನಾಥ ತಿಮ್ಮಣ್ಣ ಭಟ್ಟರು, ಇವರು ನಾಟಕ ಕಲಾವಿದರು ಮತ್ತು ಶಿಕ್ಷಕರಾಗಿ 33 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ 5-6ನೇ ತರಗತಿಯಲ್ಲಿ ರಂಗಭೂಮಿಗೆ ಪ್ರವೇಶಿಸಿದ ಅವರು, 20ಕ್ಕೂ ಹೆಚ್ಚು ಏಕಾಂಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನವಿಲಗೋಣದ ಪ್ರಸಿದ್ಧ ನಾಟಕಕಾರ ರಾಮಚಂದ್ರ ಭಟ್ಟರ ಶಿಷ್ಯರಾಗಿದ್ದ ಮಂಜುನಾಥ ಭಟ್ಟರು, 1962ರಲ್ಲಿ ಯುವಜನ ಮೇಳ ಮತ್ತು ಸ್ಥಳೀಯ ಮಿತ್ರ ಮಂಡಳಿಗಳನ್ನು ಪ್ರಾರಂಭಿಸಿ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ 30ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ.
    ಮಂಜುನಾಥ ಭಟ್ಟರು, "ಮಾರ್ಕಂಡೇಯ," "ಆಹಲ್ಲೋದ್ಧಾರ" ಮತ್ತು "ನನ್ನ ಗೋಪಾಲ" ಸೇರಿದಂತೆ ಹಲವು ನಾಟಕಗಳನ್ನು ಬರೆದಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ. 'ಬೇಲಿ ಹಣ್ಣು' ನಾಟಕ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿದೆ. 25ನೇ ವಯಸ್ಸಿನಲ್ಲಿ ವೃತ್ತಿರಂಗಭೂಮಿಯಲ್ಲಿ ಪ್ರವೇಶಿಸಿದ ಭಟ್ಟರು, ಖಳನಾಯಕ, ಹಾಸ್ಯಪಾತ್ರ, ಪೋಷಕ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 'ಕಲಾವಿದ' ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಗಳಿಸಿದ್ದಾರೆ.

ಹವ್ಯಾಸಿ ರಂಗಭೂಮಿಯ ಕಲಾವಿದ: ಸುರೇಶ ರಾಮಚಂದ್ರ ಸಿದ್ದಿಗೆ ಪ್ರಶಸ್ತಿ
ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಬಾಚನಳ್ಳಿ ನಿವಾಸಿ ಇವರು, ರಂಗಭೂಮಿ ಕಲಾವಿದ ಸುರೇಶ ರಾಮಚಂದ್ರ ಸಿದ್ದಿ, ಉತ್ತರ ಕನ್ನಡದ ರಂಗಭೂಮಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪೋಷಕರ ಕಲಾಪ್ರವೃತ್ತಿಯ ಪರಿಣಾಮವಾಗಿ, ಅವರು ಬಾಲ್ಯದಿಂದಲೇ ಸಂಗೀತ, ವಾದ್ಯ ಮತ್ತು ನೃತ್ಯ ಕಲೆಯನ್ನು ಅರ್ಥೈಸಿದರು. ತಂದೆ ರಾಮಚಂದ್ರ ಪುಟ್ಟಾ ಸಿದ್ದಿಯವರಿಂದ ಕುಣಿತ ಮತ್ತು ಸಂಗೀತ ಕಲಿತು, ಸೋದರ ಮಾವ ಬಾಬು ಸಿದ್ದಿಯಿಂದ ಸಣ್ಣಾಟದ ಕಲೆಯನ್ನು ಮೈಗೂಡಿಸಿಕೊಂಡರು.
   ಅನೇಕ ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳ ನಡುವೆಯೂ, ಸುರೇಶ ಸಿದ್ದಿ ಶಾಲೆಯ ಮೆಟ್ಟಿಲು ಹತ್ತದೆ ರಂಗಭೂಮಿಯ ಜೊತೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರು.  
 ಯಲ್ಲಾಪುರ ತಾಲೂಕಿನ ವಿವಿಧ ತಂಡಗಳಲ್ಲಿ ನಟ ಹಾಗೂ ಭಾಗವತಿಯಾಗಿ ಪಾಲ್ಗೊಂಡು, ಸಿದ್ಧಿ ಸಮುದಾಯದ ಕಲೆಗಳನ್ನು ಜೀವಂತವಾಗಿಟ್ಟಿದ್ದಾರೆ. ರಾಜ್ಯದ ಪ್ರಮುಖ ನಿರ್ದೇಶಕರಾದ ರಘುನಂದನ, ಚಿದಂಬರ ರಾವ್ ಮತ್ತು ಪರಶುರಾಮ ಗಿರಗೋಲಿಯಂತಹವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಅವರು ಪಡೆದಿದ್ದಾರೆ.
  ಪ್ರಸಕ್ತದಲ್ಲಿ, ಕೃಷಿಕರಾಗಿಯೂ, ವಾದಕರಾಗಿಯೂ, ಹವ್ಯಾಸಿ ರಂಗಭೂಮಿಯಲ್ಲಿ ತಮ್ಮ ಕೊಡುಗೆಯನ್ನು ಮುಂದುವರಿಸುತ್ತಿದ್ದಾರೆ.

ರಂಗಭೂಮಿಯ ದಿಗ್ಗಜೆಯಾಗಿ ಬೆಳಗಿದ ಸಾಧಕಿ ಯಲ್ಲಾಪೂರದ ಗಿರೀಜಾ ಸಿದ್ದಿ: 
ಉತ್ತರಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಮಂಚಿಕೇರಿಯ ಅಣಲೇಸರ ಗ್ರಾಮ ಮೂಲದ ಗಿರೀಜಾ ಸಿದ್ದಿ, ಸಿದ್ದಿ ಸಮುದಾಯದ ಪ್ರಮುಖ ಕಲಾವಿದೆಯಾಗಿದ್ದು, ರಂಗಭೂಮಿ, ಗಾಯಕಿ, ಮತ್ತು ರಂಗ ನಿರ್ದೇಶಕಿ ಎಂದು ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಗಿರಗೋಲಿ ಸಿದ್ದಿ, ಮತ್ತು ತಾಯಿ ಲಕ್ಷ್ಮೀ ಸಿದ್ದಿ ಅವರಿಂದ ಸಾಂಸ್ಕೃತಿಕ ಪರಂಪರೆಯನ್ನು ಪಡೆದು ಬೆಳೆದ ಗಿರೀಜಾ, ಪುಗಡಿ ನೃತ್ಯ, ಡಮಾಮಿ ಹಾಡುಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.
   ನೀನಾಸಮ್‌ನಲ್ಲಿ ರಂಗಶಿಕ್ಷಣ ಪಡೆದ ಗಿರೀಜಾ ಸಿದ್ದಿ, ಈ ತರಬೇತಿ ಪಡೆದ ಸಿದ್ದಿ ಸಮುದಾಯದ ಪ್ರಥಮ ಮಹಿಳೆಯಾಗಿದ್ದಾರೆ. ನೀನಾಸಮ್ ತಂಡದೊಂದಿಗೆ ಇವರು ವರ್ಷಗಳ ಕಾಲ ನಟಿಯಾಗಿ ಮತ್ತು ವಸ್ತ್ರ ವಿನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಂಗ ಸಂಸ್ಥೆಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿರುವ ಗಿರೀಜಾ, ಜಾನಪದ ನಾಟಕಗಳು, ಯಕ್ಷಗಾನ, ಮತ್ತು ಸಾಂಪ್ರದಾಯಿಕ ಕಲೆಗಳ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. 
   ಹೆಚ್ಚು ಪಾಶ್ಚಾತ್ಯ ದೇಶಗಳಲ್ಲಿಯೂ ರಂಗ ಪ್ರದರ್ಶನಗಳನ್ನು ನೀಡಿರುವ ಗಿರೀಜಾ, ತಮ್ಮ ಹಿನ್ನಲೆ ಗಾಯನದ ಮೂಲಕ ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. "ಸಲಗ" ಮತ್ತು "ಉಗ್ರಾವತಾರ" ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಉತ್ತಮ ಸಿಂಗರ ಪ್ರಶಸ್ತಿ ಗಳಿಸಿರುವ ಗಿರೀಜಾ, ರಂಗಭೂಮಿಯೊಂದಿಗೆ ಸಂಗೀತ ಕ್ಷೇತ್ರದಲ್ಲಿಯೂ ವಿಶಿಷ್ಟ ಗುರುತಿಸಿಕೊಂಡಿದ್ದಾರೆ.
   ಈ ಮೂವರು ಸಾಧಕರಿಗೆ ಮಂಚಿಕೇರಿ ರಂಗ ಸಮುಹದ ಅಧ್ಯಕ್ಷರಾದ, ರಾಮಕೃಷ್ಣ ಭಟ್ಟ ದುಂಡಿ, ರಂಗಕಲಾವಿದ ಎಂ ಕೆ ಭಟ್ ಯಡಳ್ಳಿ ಹಾಗೂ ರಂಗ ಸಮೂಹದ ಎಲ್ಲ ಪದಾಧಿಕಾರಿಗಳು ಶುಭವನ್ನು ಕೋರಿದ್ದಾರೆ.