ಯಲ್ಲಾಪುರ: ತಾಲೂಕಿನ ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟ ಟಿಪ್ಪರ್ ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 40,000 ರೂಪಾಯಿ ಮೌಲ್ಯದ ಕಳ್ಳತನವಾದ ಬ್ಯಾಟರಿಗಳು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಕಾಳಮ್ಮನಗರ ನಿವಾಸಿ ಸಂಕೇತ ರಾಜೀವ ನಾಯ್ಕ, ತನ್ನ ನಾಲ್ಕು ಟಿಪ್ಪರ್ ಲಾರಿಗಳ ಬ್ಯಾಟರಿಗಳು ಮತ್ತು ಹೈಡ್ರಾಲಿಕ್ ಜಾಕ್ ಕಳ್ಳತನವಾಗಿರುವುದಾಗಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಹಳಿಯಾಳ ನಿವಾಸಿ ಸುಭಾನಿ ಹಸನಸಾಬ ಜಂಗಲೆ, ಸಿದ್ದಿ(25) ಮತ್ತು ಮಂಚಿಕೇರಿ ನಿವಾಸಿ ಅಬ್ದುಲಹಮೀದ ಮಜೀದಸಾಬ ಮುಜಾವರ(22) ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಪೊಲೀಸರು ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದು, ಈ ಕಳ್ಳತನಕ್ಕೆ ಇನ್ನೂ ಇತರರು ಸಹಚರರಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಮ್. ನಾರಾಯಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಯಕುಮಾರ ಮತ್ತು ಜಗದೀಶ ನಾಯ್ಕ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಗಣೇಶ ಕೆ.ಎಲ್ ಇವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ರಮೇಶ ಹಾನಾಪುರ ನೇತೃತ್ವದಲ್ಲಿ ಪಿಎಸ್‌ಐ ನಿರಂಜನ ಹೆಗಡೆ. ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಯವರಾದ ಬಸವರಾಜ ಹಗರಿ, ಮಹ್ಮದ ಶಫೀ, ಉಮೇಶ ತುಂಬರಗಿ, ಮಹಾವೀರ ಡಿ.ಎಸ್. ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.