ಯಲ್ಲಾಪುರ : ಶಿಕ್ಷಣ ಪ್ರೇಮಿ ಮತ್ತು ಮಾಜಿ ಶಾಸಕ ದಿ.ಉಮೇಶ ಭಟ್ಟರವರ ಐದನೇಯ ಪುಣ್ಯಸ್ಮರಣೆ ನುಡಿ-ನಮನ ಕಾರ್ಯಕ್ರಮ ದ.ಕ ಜಿಲ್ಲೆ ಕಾರ್ಕಳದ ಹತ್ತಿರ ಬೈಲೂರ ಹೊಸ ಬೆಳಕು ಅನಾಥಾಶ್ರಮದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯಲ್ಲಾಪುರದ ಉಮೇಶ ಭಟ್ಟ ಅಭಿಮಾನಿಗಳ ಬಳಗ ಆಶ್ರಮಕ್ಕೆ ಐವತ್ತು ಡಿಲೇಕ್ಸ ದೊಡ್ಡ ಖುರ್ಚಿಗಳನ್ನು ಸಮರ್ಪಿಸಿತು.
ಖುರ್ಚಿಗಳನ್ನು ಸ್ವೀಕರಿಸಿದ ಆಶ್ರಮದ ಅಧ್ಯಕ್ಷೆ ತನುಲಾ ತರುಣ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ದಾನಿಗಳ ಸಹಾಯದಿಂದ ಆಶ್ರಮ ನಡೆಸುತ್ತಿದ್ದೇವೆ. ಈ ಆಶ್ರಮದಲ್ಲಿ ನಿರ್ಗತಿಕರಿಗೆ, ಅನಾಥರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಅವರಿಗೆ ಯಾವುದೇ ಆಶ್ರಯವಿಲ್ಲದೇ ಅನಾಥರಾಗಿರಬೇಕು ಅಂತವರಿಗೆ ನಮ್ಮ ಆಶ್ರಮದಲ್ಲಿ ಆಶ್ರಯವಿದೆ ಎಂದ ಅವರು 50 ಖುರ್ಚಿಗಳನ್ನು ಆಶ್ರಮಕ್ಕೆ ದೇಣಿಗೆಯಾಗಿ ನೀಡಿರುವುದಕ್ಕೆ ಭಟ್ಟ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಉಮೇಶ ಭಟ್ಟ ಅಭಿಮಾನಿ ಬಳಗದ ಸದಸ್ಯರಾದ ಹಳವಳ್ಳಿ ಡಿ.ಎನ್.ಹೆಗಡೆ ಮಾತನಾಡಿ, ನಾವು ಈ ಸ್ಥಳಕ್ಕೆ ಬೆಟ್ಟಿ ನೀಡಿದ್ದು ಸಾರ್ಥಕವಾಯಿತು. ನಾವು ನೀಡಿದ ಸೇವೆ ಸಮರ್ಪಕವಾಗಿ ಬಳಕೆಯಾಗುತ್ತಿದೆ ಎಂದರು.
ಕಸಾಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಸದಸ್ಯ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಮೇಶ ಭಟ್ಟರವರು ಅಜಾತಶತ್ರುವಾಗಿದ್ದರು. ಯಾವುದೇ ಬೇದ ಭಾವ ಇಲ್ಲದೆ ಜನರನ್ನು ಪ್ರೀತಿಯಿಂದ ನೋಡುತ್ತಿದ್ದರು. ಇಂದು ಅವರು ಕಟ್ಟಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗಭಾಗವಾದ ಡಿ.ಇಡ್ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನರ್ಸಿಂಗ್ ಕಾಲೇಜು ದೊಡ್ಡದಾಗಿ ಬೆಳೆದು ತನ್ಮೂಲಕ ಇಪ್ಪತ್ತೈದು ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಉಮೇಶ ಭಟ್ಟ ಅಭಿಮಾನಿಗಳ ಬಳಗ ಪ್ರತಿ ವರ್ಷ ಅವರು ನೆನಪಿಗಾಗಿ ನಿರ್ಗತಿಕರಿಗೆ, ಅನಾಥರಿಗೆ ಸಹಾಯ ಮಾಡುವ ಕಾರ್ಯವನ್ನು ಏರ್ಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೇಶ್ ಕೊಟ್ಯಾನ್, ರಘುರಾಮ ಚಂದ್ರ ಮುಂತಾದವರು ಉಪಸ್ಥಿತರಿದ್ದರು.