ಯಲ್ಲಾಪುರ : ಹಿರಿಯ ವಿದ್ಯುತ್ ಗುತ್ತಿಗೆದಾರ ಮತ್ತು ಸಮಾಜಸೇವಕ ಎಂ.ಎಂ. ಶೇಖ (ಅಬ್ದುಲ್ ಮಜೀದ ಶೇಖ) ಅವರು ಆಗಸ್ಟ್ 14ರ ರಾತ್ರಿ 10.30ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 15 ಆಗಸ್ಟ್ 2024 ರಂದು ಮಧ್ಯಾಹ್ನದೊಳಗೆ ಯಲ್ಲಾಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಎಂ.ಎಂ. ಶೇಖ ಅವರು 1990 ರಿಂದ 2000ರ ದಶಕದಲ್ಲಿ ಯಲ್ಲಾಪುರದ ಪ್ರಮುಖ ವಿದ್ಯುತ್ ಗುತ್ತಿಗೆದಾರರಾಗಿ ಹೆಸರು ಪಡೆದಿದ್ದರು. ಅವರ ಸೇವೆ ಹಾಗೂ ಪ್ರಾಮಾಣಿಕತೆ ಯಲ್ಲಾಪುರದ ಜನತೆಯಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಶೇಖ ಅವರು ಜನರ ನಡುವೆ ಉತ್ತಮ ನಂಟನ್ನು ಬೆಳೆಸಿಕೊಂಡಿದ್ದರು, ಅವರು ಹಣಕ್ಕಿಂತ ಜನರನ್ನು ಹೆಚ್ಚು ಸಂಪಾದಿಸಿದ್ದರು. ಅಂದು ಅವರು ನಡೆಸುತ್ತಿದ್ದ ಚೌಹಾನ್ ಕಾಂಪ್ಲೆಕ್ಸ್ ನ ಮೆಟ್ಟಿಲುಗಳ ಕೆಳಗಿನ ಎಲೆಕ್ಟ್ರಿಕಲ್ ಅಂಗಡಿ ಯಲ್ಲಾಪುರದ ಜನತೆಗೆ ಚಿರಪರಿಚಿತವಾಗಿತ್ತು.
ಅಂಗಡಿಯಲ್ಲಿ ವಿವಿಧ ಎಲೆಕ್ಟ್ರಿಕ್ ಪಂಪಸೆಟ್ ಮೋಟಾರ್ ವೈಂಡಿಂಗ್, ಪ್ಯಾನ್, ಗ್ರೈಂಡರ್, ಮಿಕ್ಸರ್, ಹಾಗೂ ಬೋರ್ಡ್ ದುರಸ್ತಿಯನ್ನು ನಿರ್ವಹಿಸುತ್ತಿದ್ದ ಶೇಖ ಅವರು, ಅದರ ಜೊತೆಗೆ ಯಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ಇಲೆಕ್ಟ್ರಿಕ್ ವೈರಿಂಗ್, ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಅಳವಡಿಸುವ ಗುತ್ತಿಗೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅವರ ಶ್ರಮ ಹಾಗೂ ದಕ್ಷತೆ ಅವರಿಗೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶ ಕಲ್ಪಿಸಿತ್ತು.
ಎಂ.ಎಂ. ಶೇಖ ಅವರು ಇವರ ಮಾತೃಭಾಷೆ ಉರ್ದು ಆಗಿದ್ದರೂ, ಹವ್ಯಕ ಭಾಷೆಯನ್ನು ಮತ್ತು ಕೊಂಕಣಿ ಭಾಷೆಯನ್ನು ಸಹ ಸರಾಗವಾಗಿ ಮಾತನಾಡುತ್ತಿದ್ದರು. ಅವರ ಭಾಷಾ ಸಾಮರ್ಥ್ಯ ಹಾಗೂ ಸ್ನೇಹಶೀಲತೆಯ ನುಡಿಗಳು ಗ್ರಾಮೀಣ ಭಾಗದ ಜನರಲ್ಲಿ ಅವರ ಮೇಲೆ ನಂಬಿಕೆ ಹುಟ್ಟಿಸುತ್ತಿದ್ದವು. ಭಾಷೆಯಲ್ಲಿನ ಇವರ ಪ್ರತಿಭೆಯ ಕಾರಣ ಅವರು ಅನೇಕ ಗ್ರಾಮೀಣ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತಿದ್ದರು. ಯಲ್ಲಾಪುರದ ಪ್ರಮುಖ ಗಣೇಶೋತ್ಸವ ಸಮಿತಿಯ ಮುಖ್ಯ ಸದಸ್ಯರಾಗಿ ಪ್ರತಿ ವರ್ಷ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿದ್ದರು.
ಶೇಖ ಅವರ ಅನಾರೋಗ್ಯದ ಬಗ್ಗೆ ತಿಳಿದ ಸ್ಥಳೀಯ ಶಾಸಕರಾದ ಶಿವರಾಮ ಹೆಬ್ಬಾರ್ ಕಳೆದ ಸೋಮವಾರ, ಶೇಖ ಅವರ ಮನೆಗೆ ಭೇಟಿ ನೀಡಿ, ಶೇಖ ಅವರ ಆರೋಗ್ಯ ವಿಚಾರಿಸಿ, ಬೇಗನೆ ಗುಣಮುಖರಾಗಲಿ ಎಂಬುದಾಗಿ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಪಟ್ಟಣ ಪಂಚಾಯತ ಸದಸ್ಯ ಸತೀಶ ನಾಯ್ಕ, ಪ್ರಮುಖರಾದ ಗಣಪತಿ ಮುದ್ದೆಪಾಲ, ಶಾಸಕರ ಆಪ್ತ ಸಹಾಯಕರಾದ ಕಮಲಾಕರ ನಾಯ್ಕ, ನಾಗರಾಜ ನಾಯ್ಕ ಮುಂತಾದವರು ಕೂಡ ಅವರೊಂದಿಗೆ ಇದ್ದರು.
ಎಂ.ಎಂ. ಶೇಖ ಅವರ ನಿಧನಕ್ಕೆ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಅವರು ಶೇಖ ಅವರ ಕುಟುಂಬಕ್ಕೆ ದೂರವಾಣಿ ಮೂಲಕ ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಹಾಗೂ ಸಂಘದ ಇತರೆ ಸದಸ್ಯರು ಕೂಡ ಶೋಕ ವ್ಯಕ್ತಪಡಿಸಿದ್ದಾರೆ.