ಯಲ್ಲಾಪುರ: ಆಗಸ್ಟ್ 14 ರಂದು ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಉತ್ಪತ್ತಿ ತಾಣಗಳ ನಾಶ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಮನೆ ಮನೆಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಪತ್ತೆ ಹಚ್ಚಿ ಲಾರ್ವಾ ನಾಶ ಮಾಡಲಾಯಿತು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಡೆಂಗ್ಯೂ ಕುರಿತು ಅರಿವು ಮೂಡಿಸಿದರು. ಸಾರ್ವಜನಿಕರಿಗೆ ಡೆಂಗ್ಯೂ ರೋಗದ ಲಕ್ಷಣಗಳು, ತುರ್ತು ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಡೆಂಗ್ಯೂ ನಿಯಂತ್ರಣದಲ್ಲಿ ಇದು ಅತ್ಯಂತ ಸಹಕಾರಿ ಆಗಲಿದೆ.
ಈ ಕಾರ್ಯಕ್ರಮವು ಆರೋಗ್ಯ ಇಲಾಖೆಯ ಯೋಜನೆಯ ಭಾಗವಾಗಿ ನಡೆಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಸಿಬ್ಬಂದಿಗಳಾದ ವಿರುಪಾಕ್ಷ ಶಿರೂರ, ಎನ್. ಎಲ್. ಕಳಸದ, ಪ್ರವೀಣ ಇನಾಮದಾರ, ಎಲ್ಲ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರು ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
ಯಲ್ಲಾಪುರ : ತಾಲೂಕಿನ ಉಮ್ಮಚಗಿ ಭಾಗದಲ್ಲಿ ಬಿಜೆಪಿ ವತಿಯಿಂದ ಅ.13 ರಂದು ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಶ್ರೀಪಾದ ಹೆಗಡೆ ಸಂಕದಗುಂಡಿ, ಮಹಿಳಾ ಮೋರ್ಚಾ ಪ್ರಮುಖಿ ಸರಸ್ವತಿ ಪಟಗಾರ್, ಬೂತ್ ಅಧ್ಯಕ್ಷ ಮಣಿಕಂಠ ದೇವಾಡಿಗ, ಯುವಮೋರ್ಚಾ ಸದಸ್ಯರಾದ ಶ್ರೀಧರ್ ಪೂಜಾರಿ, ಶುಭಾಷ್ ಪಟಗಾರ್ ಮತ್ತು ಪಕ್ಷದ ವಿವಿಧ ಸ್ತರದ ಪ್ರಮುಖರು ಉಪಸ್ಥಿತರಿದ್ದರು.
ಯಲ್ಲಾಪುರ : ವಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕಿನ ಕುಂದರಗಿ ಸ.ಹಿ.ಪ್ರಾ.ಶಾಲೆಯ 7 ನೆಯ ತರಗತಿ ವಿದ್ಯಾರ್ಥಿ ನವೀನ್ ನಾಯ್ಕ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಪಾಲಕ-ಪೋಷಕರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.