ಯಲ್ಲಾಪುರ/ನವದೆಹಲಿ : ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ವಿನ್ಯಾಸದಲ್ಲಿ ಬದಲಾವಣೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ತಿಳಿಸಿದಂತೆ, "ಯೋಜನೆಯ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯದಲ್ಲಿ ದ್ವಿಪಥಕ್ಕಾಗಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ." ಎಂದಿದ್ದಾರೆ.
ಪಶ್ಚಿಮ ಘಟ್ಟದ 108 ಕಿ.ಮೀ. ದಟ್ಟ ಅರಣ್ಯಗಳ ನಡುವೆ ಸಾಗುವ ಈ ಯೋಜನೆ ಅನುಷ್ಠಾನಕ್ಕಾಗಿ 2 ಲಕ್ಷ ಮರಗಳ ಹನನ ಮಾಡಬೇಕಾಗುತ್ತದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದರು.
"ಹುಬ್ಬಳ್ಳಿ-ಕಿರವತ್ತಿ (47 ಕಿ.ಮೀ) ವಿಭಾಗದಲ್ಲಿ ಮಣ್ಣು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, 569.64 ಹೆಕ್ಟೇರ್ ಅರಣ್ಯ ಭೂಮಿಯ ಅರಣ್ಯ ಮತ್ತು ವನ್ಯಜೀವಿ ಅನುಮೋದನೆ ಹಾಗೂ ಸಂಬಂಧಿತ ವ್ಯಾಜ್ಯಗಳಿಂದಾಗಿ ಉಳಿದ ಕಾಮಗಾರಿ ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ವ್ಯಾಜ್ಯ ಇತ್ಯರ್ಥವಾಗಿರುವ ಕಾರಣ ವನ್ಯಜೀವಿಗಳಿಗೆ ಪದೇ ಪದೇ ತೊಂದರೆಯಾಗುವುದನ್ನು ತಪ್ಪಿಸಲು ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸಲು ನಿರ್ಧರಿಸಲಾಗಿದೆ" ಎಂದು ಸಚಿವರು ತಿಳಿಸಿದರು.