ಯಲ್ಲಾಪುರ : ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಹಾವಳಿ ಮುಂದುವರಿಸಿದ್ದ ಮಳೆಯ ತೀವ್ರತೆ ಭಾನುವಾರದಿಂದ ಗಣನೀಯವಾಗಿ ಇಳಿಕೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ, ಪ್ರಮುಖ ಅನಾಹುತಗಳನ್ನು ಸಂಭವಿಸಿಲ್ಲ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ.
ತಾಲೂಕಿನಾದ್ಯಂತ ಹಳ್ಳ, ಕೆರೆ, ನದಿಗಳು ತುಂಬಿ ಹರಿಯುವಂತೆ ಮಾಡಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಲು ಸಹಕಾರಿಯಾಯಿತು.
ಆದರೆ, ಮಳೆಯ ಅಬ್ಬರದಿಂದಾಗಿ ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಜಮೀನು ಕುಸಿತ ಮತ್ತು ಮಣ್ಣು ಸವಕಳಿಯಂತಹ ಅಹಿತಕರ ಘಟನೆಗಳು ನಡೆದಿವೆ. ಅಲ್ಲದೇ ಮರ ಮುರಿದು ಬೀಳುವುದು, ವಿದ್ಯುತ್ ದೂರಸಂಪರ್ಕ ಸಮಸ್ಯೆಯಾಗಿತ್ತು, ಕೆಲ ರಸ್ತೆಗಳು ಹಾನಿಗೊಳಗಾಗಿದ್ದವು ಇದರಿಂದ ಕೆಲ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸ್ಥಳೀಯ ಆಡಳಿತ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
ಹವಾಮಾನ ಇಲಾಖೆಯು ಆಗಸ್ಟ್ 5ರ ವೇಳೆಗೆ ಮಳೆ ನಿಲ್ಲುವ ನಿರೀಕ್ಷೆ ವ್ಯಕ್ತಪಡಿಸಿದ್ದು, ಜನರಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿಗೆ ಕಾರಣವಾಗಿದೆ. ಮಳೆಯ ತೀವ್ರತೆ(ರವಿವಾರ 49 ಮಿ.ಮೀ, ಸೋಮವಾರ 24.4 ಮಿ.ಮೀ) ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು, ವ್ಯಾಪಾರಿಗಳು, ಕೂಲಿಗಾರರು ಮತ್ತು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ, ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳು ಕರೆ ನೀಡಿದ್ದಾರೆ.