ಯಲ್ಲಾಪುರ: ಒಬ್ಬ ಕಲಾವಿದನಾಗಿ, ಒಬ್ಬ ಮಾಡೆಲಾಗಿ, ಮತ್ತು ಒಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿತನಾಗಿ ತನ್ನದೇ ಆದ ಗುರುತನ್ನು ಸೃಷ್ಟಿಸಿಕೊಂಡಿರುವ ತ್ರಿವರ್ಣ, ಯಲ್ಲಾಪುರದ ಹೆಮ್ಮೆಯಾಗಿದ್ದಾರೆ. ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದ ತ್ರಿವರ್ಣ, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನ ನಡೆಸುತ್ತಾ ಇಂದು ರಾಜ್ಯದಲ್ಲಿ ಹೆಸರು ಮಾಡಿದ್ದಾರೆ.
ಮೂಲತಃ ಯಲ್ಲಾಪುರದ ರವೀಂದ್ರನಗರ ನಿವಾಸಿಯಾದ ತ್ರಿವರ್ಣ, ತಂದೆ ವೈಟಿಎಸ್ಎಸ್ ಗಣಿತ ವಿಷಯದ ಶಿಕ್ಷಕರಾಗಿದ್ದ ವಿ.ಎಂ ಮೇದಾರ (ಮೇದಾರ ಮಾಸ್ತರ್) ಮತ್ತು ತಾಯಿ ಯಲ್ಲಾಪುರ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಆಶಾ ಸಿ ಇಂಗಳಗಿ, ಅವರ ಪ್ರೋತ್ಸಾಹದೊಂದಿಗೆ ತ್ರೀವರ್ಣ ತಮ್ಮ ಕಲಾ ಪ್ರತಿಭೆಯನ್ನು ಬೆಳೆಸಿಕೊಂಡರು. ಅವರ ಅಣ್ಣ ಭಾರತಶ್ರೀ ಭಾರತೀಯ ಸೈನ್ಯದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೇ ಸಮಾಜ ಸೇವೆಯಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿ ಕುಟುಂಬ ಗುರುತಿಸಿಕೊಂಡಿದೆ.
ಉಡುಪಿಯ ಚಿತ್ರಕಲಾ ಮಂದಿರದಲ್ಲಿ ಬಿವಿಎ ಪದವಿಯನ್ನು ಪಡೆದ ತ್ರಿವರ್ಣ, 2017ರಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕಾಲೇಜು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡರು. ತದನಂತರ, ಅನೇಕ ಚಿತ್ರಕಲಾ ಶಿಬಿರಗಳನ್ನು ನಡೆಸಿಕೊಟ್ಟು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಮಾಡಲಿಂಗ್ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡ ತ್ರಿವರ್ಣ, 2021ರಲ್ಲಿ ನಡೆದ ಗ್ಲೋಬಲ್ ಮಿಸ್ಟರ್ ಇಂಡಿಯಾ ಹಾಗೂ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಣಿಪಾಲ್‌ನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಮಂಗಳೂರಿನ ಪ್ರಸಿದ್ಧ ಟಿವಿ ಚಾನೆಲ್ ಸ್ಪಂದನದಲ್ಲಿ ಗುಡ್ ಮಾರ್ನಿಂಗ್ ಸ್ಪಂದನ ಎಂಬ ಕಾರ್ಯಕ್ರಮದಲ್ಲಿ ತಮ್ಮ ವಿಶೇಷ ಮಾತಿನ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದರು.
ಪ್ರಸ್ತುತ, ಗದುಗಿನ ವಿಜಯ ಕಾಲೇಜಿನಲ್ಲಿ ಪೇಂಟಿಂಗ್ಸ್‌ನಲ್ಲಿ ಎಂವಿಎ ಪದವಿಯನ್ನು ಪಡೆದಿರುವ ತ್ರಿವರ್ಣ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ ತಮ್ಮ ಕಲಾಕೃತಿಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಹವ್ಯಾಸವನ್ನು ಒಂದು ವೃತ್ತಿಯನ್ನಾಗಿ ಮಾಡಿಕೊಂಡ ತ್ರಿವರ್ಣ, ಯುವ ಜನರಿಗೆ ಪ್ರೇರಣೆಯಾಗಿದ್ದಾರೆ.
ತ್ರಿವರ್ಣ ಮಾತನಾಡಿ, :"ಕಲೆ ನನ್ನ ಜೀವನ. ಚಿತ್ರಕಲೆ ಮತ್ತು ಮಾಡಲಿಂಗ್ ಎರಡೂ ನನ್ನನ್ನು ಸಂತೋಷಗೊಳಿಸುತ್ತವೆ. ಯಲ್ಲಾಪುರ ನನ್ನ ಹುಟ್ಟೂರು. ಇಲ್ಲಿಂದಲೇ ನನಗೆ ಪ್ರೋತ್ಸಾಹ ಸಿಕ್ಕಿತು. ನಾನು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಆಸೆ ನನ್ನಲ್ಲಿದೆ."
ಯಲ್ಲಾಪುರದ ತ್ರಿವರ್ಣ ಅವರ ಈ ಸಾಧನೆಗೆ ನಾವೆಲ್ಲರೂ ಅಭಿನಂದಿಸೋಣ ಮತ್ತು ಅವರ ಭವಿಷ್ಯಕ್ಕೆ ಶುಭ ಹಾರೈಸೋಣ.
( *** ಜಗದೀಶ ನಾಯಕ)