ಯಲ್ಲಾಪುರ : ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿನ ಕೆನರಾ ಬ್ಯಾಂಕ್‌ಗೆ ಸಂಬಂಧಿಸಿರುವ ಎಟಿಎಂ ಕಳೆದ 6-7 ದಿನಗಳಿಂದ ಮುಚ್ಚಿರುವುದರಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಣ ಪಡೆಯಲು ಬ್ಯಾಂಕಿಗೆ ಹೋಗುವುದು ಅನಿವಾರ್ಯವಾಗುತ್ತಿದ್ದು, ಇದರಿಂದ ಗ್ರಾಹಕರು ಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಈ ಸಂಬಂಧ ಮಂಚಿಕೇರಿಯ ಸಮಾಜ ಸೇವಕ ವಿಕಾಸ ನಾಯ್ಕ ಯಲ್ಲಾಪುರ ನ್ಯೂಸ್ ಹೇಳಿಕೆ ನೀಡಿ, ಗ್ರಾಮೀಣ ಭಾಗದ ಜನರು ದೂರದ ಪಟ್ಟಣಗಳಿಗೆ ಹೋಗಿ ಹಣ ಪಡೆಯುವ ಅನಿವಾರ್ಯತೆಯಿಂದ ಮುಕ್ತರಾಗಲು ಎಟಿಎಂಗಳು ಬಹಳ ಮುಖ್ಯ. ಇದರಿಂದ ಜನರ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ತಕ್ಷಣ ಹಣ ಪಡೆಯುವುದು ಸುಲಭವಾಗುತ್ತದೆ. ಹೀಗೆ ಎಟಿಎಂಗಳು ಗ್ರಾಮೀಣ ಜನಜೀವನದಲ್ಲಿ ಹಲವು ಬದಲಾವಣೆಗಳನ್ನು ತರಬಲ್ಲವು. ಅಲ್ಲದೆ, ಗ್ರಾಮೀಣ ಉದ್ಯಮಿಗಳಿಗೆ ಕೂಡ ಎಟಿಎಂಗಳು ತುಂಬಾ ಅನುಕೂಲಕರವಾಗಿವೆ.
ಮಂಚಿಕೇರಿಯ ಎಟಿಎಂ ಸದಾ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಗದು ವ್ಯವಹಾರವೇ ಹೆಚ್ಚಾಗಿರುವುದರಿಂದ ಎಟಿಎಂ ಅವಶ್ಯಕತೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.