ಯಲ್ಲಾಪುರ: ತಾಲೂಕಿನ ಅಂಗನಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ಮಕ್ಕಳು ಕೃಷಿಯ ಕುರಿತು ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸುವ ಅವಕಾಶಕ್ಕೆ ಪಾತ್ರರಾದರು. ಶುಕ್ರವಾರ, ಸ್ಥಳೀಯ ನಿವಾಸಿ ಸೋಮಣ್ಣ ಮರಾಟೆಯವರ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಮಕ್ಕಳು ಕೃಷಿಯ ಮಹತ್ವವನ್ನು ಅರಿತುಕೊಂಡರು.
ಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಹೆಗಡೆ ಅವರು, 'ಕೇಳಿಕಲಿ' ಮಾದರಿಯ ಪಾಠದ ಜೊತೆಗೆ 'ಮಾಡಿಕಲಿ' ತತ್ವದಡಿಯಲ್ಲಿ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶಿಕ್ಷಕಿ ಸೌಮ್ಯ ಅವರು ಮಕ್ಕಳಿಗೆ ನಾಟಿ ಮಾಡುವ ವಿಧಾನವನ್ನು ಸರಳವಾಗಿ ವಿವರಿಸಿದರು.
ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಮಕ್ಕಳು ಕೇವಲ ಕೃಷಿಯ ಬಗ್ಗೆ ಮಾತ್ರವಲ್ಲದೆ, ಪ್ರಕೃತಿಯೊಂದಿಗೆ ಸಂವಾದ ನಡೆಸುವುದು ಹೇಗೆ ಎಂಬುದನ್ನು ಕಲಿತರು. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಕೃಷಿಯ ಕಡೆಗೆ ಆಸಕ್ತಿ ಹುಟ್ಟಿಸುವುದರ ಜೊತೆಗೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು, ಮಕ್ಕಳ ಕಲಿಕೆಯಲ್ಲಿ ಈ ರೀತಿಯ ಪ್ರಾಯೋಗಿಕ ಚಟುವಟಿಕೆಗಳು ಬಹಳ ಮುಖ್ಯ ಎಂದು ಹೇಳಿದರು.
ಹೊಸ ಅನುಭವ: ಮೊದಲ ಬಾರಿಗೆ ಗದ್ದೆ ನೋಡಿ, ಮಣ್ಣನ್ನು ಸ್ಪರ್ಶಿಸಿ, ನಾಟಿ ಮಾಡಿದ ಮಕ್ಕಳು ಹೊಸ ವಿಷಯ ಕಲಿತರು, ನನಗೆ ಗದ್ದೆಯಲ್ಲಿ ನಾಟಿ ಮಾಡುವುದು ಬಹಳ ಇಷ್ಟವಾಯಿತು. ನಾನು ಮೊದಲ ಬಾರಿಗೆ ನಾಟಿ ಮಾಡುವುದು ನನಗೆ ತಿಳಿದಿರಲಿಲ್ಲ ಬೀಜದಿಂದ ಒಂದು ಗಿಡ ಬೆಳೆಯುತ್ತದೆ ಎಂದು ವಿದ್ಯಾರ್ಥಿನಿಯೋರ್ವಳು ಅಭಿಪ್ರಾಯ ಪಟ್ಟಳು.
ಈ ರೀತಿಯ ಪ್ರಾಯೋಗಿಕ ಕಲಿಕೆಯು ಮಕ್ಕಳ ಕಲಿಕೆಯಲ್ಲಿ ಹೊಸ ಯಾವ ರೀತಿಯ ಬದಲಾವಣೆ ತರುತ್ತದೆ. "ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಕೇವಲ ಜ್ಞಾನವನ್ನು ತುಂಬುವುದಲ್ಲದೆ, ಅವರಲ್ಲಿ ಕೌಶಲ್ಯಗಳನ್ನು ಬೆಳೆಸುತ್ತವೆ. ಅವರು ತಮ್ಮ ಕೈಗಳಿಂದ ಕೆಲಸ ಮಾಡುವುದನ್ನು ಕಲಿಯುತ್ತಾರೆ, ತಂಡದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಾರೆ ಮತ್ತು ಪ್ರಕೃತಿಯ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ," ಎಂದು ಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಹೆಗಡೆ ಅಭಿಪ್ರಾಯ ಪಟ್ಟರು.