ಯಲ್ಲಾಪುರ: ವಜ್ರಳ್ಳಿಯ ಆದರ್ಶ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ, ಅಡಿಕೆ ಕೊಳೆ ರೋಗದಿಂದಾದ ಹಾನಿಗಾಗಿ ಹವಾಮಾನ ಆಧರಿತ ಬೆಳೆ ವಿಮೆಯಡಿ ಹೆಚ್ಚು ಪರಿಹಾರ ನೀಡುವಂತೆ ತಹಶೀಲ್ದಾರ ಹಾಗೂ ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದೆ.
ಬುಧವಾರ, ಸಂಘದ ಅಧ್ಯಕ್ಷ ದತ್ತಾತ್ರೇಯ ತಿಮ್ಮಣ್ಣ ಭಟ್ಟ ತಹಶೀಲ್ದಾರ ಅಶೋಕ ಭಟ್ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಈ ಮನವಿಯಲ್ಲಿ ಅಂಬಗಾಂವ, ಜೋಗಳೆಪಾಲ, ಹೊನಗದ್ದೆ, ವಜ್ರಳ್ಳಿ, ತಾರಗಾರ, ಬೀಗಾರ, ತೇಲಂಗಾರ ಹಾಗೂ ಚಿಮ್ನಳ್ಳಿ ಗ್ರಾಮಗಳಲ್ಲಿ ಹಾನಿ ಉಂಟಾಗಿರುವ ಬಗ್ಗೆ ವಿವರ ನೀಡಲಾಗಿದೆ. ಕೊನೆಯ ಒಂದುವರೆ ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಗ್ರಾಮಗಳ ರೈತರು ಬೆಳೆದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಕೊಳೆರೋಗ ಹರಡಿದೆ. ಇದರಿಂದಾಗಿ ಬೆಳೆ ಶೇ.50 ಕ್ಕಿಂತಲೂ ಹೆಚ್ಚಾಗಿ ಹಾನಿಯಾಗಿದೆ.
ಈ ಪ್ರದೇಶದ ಬಹುತೇಕ ರೈತರು ಚಿಕ್ಕ ಮತ್ತು ಅತಿ ಚಿಕ್ಕ ಹಿಡುವಳಿದಾರರು, ಅಡಿಕೆ ಬೆಳೆಯೇ ಅವರ ಮುಖ್ಯ ಆದಾಯದ ಮೂಲವಾಗಿದೆ. ಈ ರೈತರು ಬೆಳೆಸಾಲ, ಆಸಾಮಿ ಖಾತೆ ಸಾಲ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸಾಲ ಮರುಪಾವತಿಯಲ್ಲಿ ತೊಂದರೆಯಾದಲ್ಲಿ, ಹೆಚ್ಚಿನ ಪರಿಹಾರ ಅವಶ್ಯಕ ಎಂದು ಸಂಘದ ಮನವಿ ತಿಳಿಸಿದೆ.
ಈ ಹಾನಿಯನ್ನು ಸರಿಪಡಿಸಲು, ಇಲಾಖೆ ಸಮೀಕ್ಷೆ ನಡೆಸಿ, ರೈತರಿಗೆ ಹೆಚ್ಚು ವಿಮಾ ಪರಿಹಾರ ನೀಡುವಂತೆ ಸಹಕಾರ ಸಂಘದ ಮನವಿಯಲ್ಲಿ ಕೇಳಿಕೊಂಡಿದೆ.
ಅಡಿಕೆ ಕೊಳೆರೋಗದ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
ಯಲ್ಲಾಪುರ: ಕೊಳೆರೋಗ ಪೀಡಿತ ಬೀಗಾರ, ವಜ್ರಳ್ಳಿಯ ಭಾಗಗಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ಕೀರ್ತಿ ಬಿ ಎಂ ಬುಧವಾರ ಭೇಟಿ ನೀಡಿ, ಹಾನಿಯ ಸಮೀಕ್ಷೆ ನಡೆಸಿದರು.
ತಾಲೂಕಿನ ಬೀಗಾರ, ವಜ್ರಳ್ಳಿ, ತೇಲಂಗಾರ, ಹೊನ್ನಗದ್ದೆ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಅಡಿಕೆ ಕೊಳೆರೋಗ ವ್ಯಾಪಕವಾಗಿ ಹರಡಿದ್ದು, ನಿರಂತರ ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಔಷಧಿ ಸಿಂಪರಣೆಯ ಮೂಲಕ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬಿರುಸಿನ ಗಾಳಿ ಮತ್ತು ಮಳೆಯಿಂದ ಎತ್ತರದ ಅಡಿಕೆ ಮರಗಳು ನೆಲಕ್ಕುರುಳಿದ್ದು, ಇಳುವರಿ ಕುಂಠಿತವಾಗುವ ಭಯದಲ್ಲಿ ಬೆಳೆಗಾರರು ಸಂಕಟ ಅನುಭವಿಸುತ್ತಿದ್ದಾರೆ.
ಕೊಳೆರೋಗ ತೀವ್ರವಾಗಿ ಹರಡಿರುವುದರಿಂದ ಔಷಧಿ ಸಿಂಪರಣೆ ಮಾಡಲು ಕೊನೆಗೌಡರ ಕೊರತೆಯುಂಟಾಗಿದೆ. ಡ್ರೈಯರ್‌ಗಳ ಕೊರತೆಯಿಂದ ಬೆಳೆಗಾರರು ಕಷ್ಟಪಡುತ್ತಿದ್ದಾರೆ. ಬಲಿಯದ ಎಳೆಯ ಅಡಿಕೆಗಳು ಉದುರಿದ ಪರಿಣಾಮ ಮುಂಬರುವ ಫಸಲಿನಲ್ಲಿ ಅಪಾರ ನಷ್ಟ ಸಂಭವಿಸುವ ಸಾಧ್ಯತೆಯಿದೆ.