ಯಲ್ಲಾಪುರ: ಯಲ್ಲಾಪುರ ನ್ಯಾಯಾಲಯದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಾಕಾಯಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಯಲ್ಲಾಪುರ ವಕೀಲರ ಸಂಘದ ವತಿಯಿಂದ 50 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ನ್ಯಾಯವಾದಿ ಎನ್. ಆರ್. ಭಟ್ ಕೊಡ್ಲಗದ್ದೆ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಾಕಾಯಿ ಮಾತನಾಡಿ, ನ್ಯಾಯಾಲಯದಲ್ಲಿ ಹಿರಿಯ ಮತ್ತು ನುರಿತ ಅನುಭವವುಳ್ಳ ನ್ಯಾಯವಾದಿಗಳ ಅವಶ್ಯಕತೆ ಇದ್ದು, ಇದರಿಂದ ಕಿರಿಯ ವಕೀಲರಿಗೆ ವೃತ್ತಿಗೆ ಸಂಬಂಧಪಟ್ಟ ಮಾರ್ಗದರ್ಶನ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ವಕೀಲ ಎನ್. ಆರ್. ಭಟ್ ಕೊಡ್ಲಗದ್ದೆ ಮಾತನಾಡಿ, ವಕೀಲರಾದವರು ವೃತ್ತಿಯಲ್ಲಿ ತಮ್ಮನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡು ನಿರಂತರ ಅಧ್ಯಯನ ಮಾಡಿ ಕಾನೂನಿನ ಜ್ಞಾನವನ್ನು ಹೊಂದಿರಬೇಕು. ನಮ್ಮನ್ನು ನಂಬಿ ನ್ಯಾಯ ಬಯಸಿ ಬರುವ ಪಕ್ಷಗಾರರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಪೂರ್ಣ ಜವಾಬ್ದಾರಿ ಹೊಂದಿರಬೇಕು. ಆ ಮೂಲಕ ವೃತ್ತಿಯ ಘನತೆಯನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
ತಾನು ಇಂದಿಗೆ ವಕೀಲಿ ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿದ್ದೇನೆ. ಈ ಸುದೀರ್ಘ ವೃತ್ತಿ ಜೀವನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿದ್ದೇನೆ ಎನ್ನುವ ಸಮಾಧಾನ ತನಗಿದೆ ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿಗಳಾದ ಜಿ.ಎಸ್. ಭಟ್ ಹಳವಳ್ಳಿ, ಎನ್. ಟಿ. ಗಾಂವ್ಕರ್, ಆರ್. ಕೆ. ಭಟ್, ಡಿ. ಕೆ. ಭಟ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಕೀಲರಾದ ವಿ.ಪಿ. ಭಟ್ ಕಣ್ಣಿಮನೆ, ಅಧ್ಯಕ್ಷೆ ಸರಸ್ವತಿ ಭಟ್, ಕಾರ್ಯದರ್ಶಿ ಜಿ.ಜಿ. ಪಾಠಣಕರ್, ಎನ್.ಕೆ. ಭಾಗ್ವತ್, ಆರ್.ಕೆ. ಭಟ್, ಬೀಬೀ ಅಮೀನಾ ಶೇಖ ಸೇರಿ ಎನ್.ಆರ್.ಭಟ್ ಅವರನ್ನು ಸನ್ಮಾನಿಸಿದರು.
ವಕೀಲರಾದ ಕೆ.ಎನ್. ಹೆಗಡೆ, ಜಿ. ಎಸ್. ಭಟ್ ಕಣ್ಣಿಮನೆ, ಪಿ. ಜಿ. ಭಟ್, ವಿ.ಟಿ. ಭಟ್, ಪಿ.ಜಿ. ಭಟ್, ಶುಭಾಸ ಭಟ್, ಗಣೇಶ್ ಭಟ್, ವಿ.ಎನ್. ನಾಯ್ಕ, ಜೆ.ಪಿ. ನಾಯ್ಕ, ಮಹೇಶ್ ನಾಯ್ಕ, ಜಿ.ವಿ. ಭಾಗ್ವತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.