ಯಲ್ಲಾಪುರ : ತಾಲೂಕಿನ ಮಾವಿನಮನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕಿ ಪ್ರತಿಮಾ ಕೋಮಾರರ ಬೀಳ್ಕೊಡುಗೆ ಸಮಾರಂಭವು ಗ್ರಾಮಸ್ಥರ ಹೃದಯವನ್ನು ಮುಟ್ಟುವಂತಹ ಒಂದು ಭಾವನಾತ್ಮಕ ಕ್ಷಣವಾಗಿತ್ತು. ಸುಮಾರು 17 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಪ್ರತಿಮಾ ಅವರು ಈಗ ಶಿರಸಿಗೆ ವರ್ಗಾವಣೆ ಆಗಿರುವುದರಿಂದ, ಗ್ರಾಮಸ್ಥರು ಅವರನ್ನು ಅತ್ಯಂತ ಗೌರವದಿಂದ ಬೀಳ್ಕೊಟ್ಟರು.
ಪಾಲಕರು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಶಿಕ್ಷಕಿಯ ಮಡಿಲು ತುಂಬಿ ಹಾರೈಸಿದರು. ಅರಿಶಿಣ, ಕುಂಕುಮ ಹಚ್ಚಿ, ಬಾಗಿನ ನೀಡಿ ಮುಂದಿನ ವೃತ್ತಿ ಜೀವನಕ್ಕೆ ಗ್ರಾಮದ ಮಹಿಳೆಯರು ಶುಭ ಹಾರೈಸಿದರು. ಅತ್ಯಂತ ಸರಳವಾದ ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನ ಸೇರಿದ್ದು ಇದೊಂದು ವಿಶೇಷ ಘಟನೆಯಾಗಿದೆ. ಇಂತಹ ಸರಳ ಗ್ರಾಮದಲ್ಲಿ ಗುರುಗಳಿಗೆ ಇಷ್ಟೊಂದು ಪ್ರೀತಿ ಮತ್ತು ಗೌರವ ಸಿಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಈ ಸಮಾರಂಭದಲ್ಲಿ ಮಾವಿನಮನೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಬ್ಬಣ್ಣ ಕುಂಟೆಗಾಳಿ, ಆ ಭಾಗದ ಪಂಚಾಯತ ಸದಸ್ಯರಾದ ಮಾಬ್ಲೇಶ್ವರ ಭಟ್ಟ, ಸಮಾಜ ಸೇವಕರಾದ ಟಿ.ಸಿ.ಗಾಂವ್ಕಾರ, ಯಲ್ಲಾಪುರದ ಕ್ಷೇತ್ರ ಸಂಯೋಜಕರಾದ ಸಂತೋಷ ಜಿಗಳೂರ, ಸಿ.ಆರ್.ಪಿ ಪ್ರಭಾಕರ ಭಟ್ಟ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅನಂತ ಗೌಡ, ಎಸ್ .ಡಿ.ಎಮ್.ಸಿ ಎಲ್ಲಾ ಸದಸ್ಯರು, ಪಾಲಕ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಇದ್ದರು.