ಯಲ್ಲಾಪುರ : ಪಟ್ಟಣದ ನಾಯಕನಕೆರೆಯ ದತ್ತಾತ್ರೇಯ ಮಂದಿರವು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯ ದೇವಾಲಯವನ್ನಾಗಿ ಮರು ನಿರ್ಮಾಣಗೊಳ್ಳುತ್ತಿದೆ. ಡಿಸೆಂಬರ್ 14ರಂದು ನಡೆಯುವ ದತ್ತ ಜಯಂತಿಯ ಸಂದರ್ಭದಲ್ಲಿ ಇದರ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಈ ವಿಷಯವನ್ನು ಬಹಿರಂಗಪಡಿಸಿದರು. ಅವರು ಆಗಸ್ಟ್ 17ರಂದು ಮಂದಿರದ ನಿರ್ಮಾಣ ಹಂತದಲ್ಲಿರುವ ಕೆತ್ತನೆ ಕಾರ್ಯವನ್ನು ಪರಿಶೀಲಿಸುತ್ತಿದ್ದರು.
17 ಅಡಿ ಆಳದ ಕಲ್ಲಿನ ಅಡಿಪಾಯವನ್ನು ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ವಾಸ್ತು ತಜ್ಞ ಮಹೇಶ್ ಮುನಿಯಂಗಳ ಈ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದಾರೆ. ಅವರು ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಗುಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಅಮೆರಿಕದಲ್ಲೂ ಶಿಲಾಮಯ ಮಂದಿರ ನಿರ್ಮಾಣ ಮಾಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಶಿಲ್ಪಿ ವೆಂಕಟರಮಣ ಭಟ್ ಸುರಾಲು ಮಂದಿರಕ್ಕೆ ಬೇಕಾಗಿರುವ ಕಲ್ಲುಗಳನ್ನು ಕೆತ್ತಿ ಜೋಡಿಸುವ ಕೆಲಸ ಮಾಡುತ್ತಿದ್ದಾರೆ.
ನೂರಾರು ವರ್ಷಗಳ ಹಿಂದೆ ಬ್ರಹ್ಮಾನಂದ ಗಣೇಶ ಯೋಗಿಗಳು ಈ ಮಂದಿರವನ್ನು ಸ್ಥಾಪಿಸಿದ್ದರು. ನಂತರ ಶಿವಾನಂದ ಯೋಗಿಗಳು ಇಲ್ಲಿ ತಪಸ್ಸನ್ನು ಆಚರಿಸಿ ಪುಣ್ಯ ಭೂಮಿಯನ್ನಾಗಿ ಪರಿವರ್ತಿಸಿದ್ದರು. ಈಗ ಶ್ರೀ ರಾಘವೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ಮಂದಿರ ಅಭಿವೃದ್ಧಿ ಪಡಿಸಲಾಗುತ್ತಿದೆ.
ತಾಲೂಕಿನ ಜನರ ಸಹಾಯದಿಂದ ಈ ಮಂದಿರ ನಿರ್ಮಾಣಗೊಳ್ಳಬೇಕಾಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಗರ್ಭಗುಡಿ ನಿರ್ಮಾಣದ ನಂತರ ಇನ್ನೆರಡು ಕೋಟಿ ರೂಪಾಯಿ ವೆಚ್ಚದಲ್ಲಿ ಚಂದ್ರಶಾಲೆ, ಕಲ್ಯಾಣ ಮಂಟಪ, ವಸತಿಗ್ರಹ ಮುಂತಾದ ವ್ಯವಸ್ಥೆಗಳನ್ನು ನಿರ್ಮಿಸಲು ಯೋಜನೆ ಇದೆ. ಭಕ್ತರು ಸಹಾಯ ಮಾಡಿ, ಗುರುವಿನ ಕೃಪೆಗೆ ಪಾತ್ರರಾಗಲು ವಿನಂತಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಶ್ರೀರಂಗ ಕಟ್ಟಿ, ನಾಗೇಶ ಯಲ್ಲಾಪುರಕರ್, ಕಾರ್ಯದರ್ಶಿ ಶಾಂತಾರಾಮ ಹೆಗಡೆ, ಖಜಾಂಚಿ ಪ್ರಶಾಂತ ಹೆಗಡೆ, ನಿರ್ದೇಶಕ ಕೆ ಟಿ ಭಟ್ಟ ಗುಂಡ್ಕಲ್ ಉಪಸ್ಥಿತರಿದ್ದರು.