ಯಲ್ಲಾಪುರ: ಕುಡಿದ ನಶೆಯಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯ ಸಾವನಪ್ಪಿರುವ ಘಟನೆ ಮಂಗಳವಾರ ಪಟ್ಟಣದ ಪೋಸ್ಟ್ ಆಫೀಸ್ ಮುಂಭಾಗದ ಹಳೆಯ ಕಟ್ಟಡದಲ್ಲಿ ಪತ್ತೆಯಾಗಿದೆ.
ಪಟ್ಟಣದ ಅಕ್ಬರಗಲ್ಲಿ ನಿವಾಸಿ ವೃತ್ತಿಯಲ್ಲಿ ಆಚಾರಿ ಕೆಲಸ ಮಾಡುವ ಅಬ್ದುಲ್ ಖಾದರ್ ಖಾನ್ (65) ಮೃತರಾಗಿದ್ದು, ಅವರ ಸಾವಿಗೆ ಸಂಬಂಧಿಸಿದಂತೆ ಮೃತನ ಮಗ ಮುರ್ತುಜಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮುರ್ತುಜಾ ಖಾನ್ ದೂರಿನ ಪ್ರಕಾರ, ಅಬ್ದುಲ್ ಖಾದರ್ ಖಾನ್ ಅವರು ಮದ್ಯಪಾನದ ನಶೆಯಲ್ಲಿ ನಿದ್ರಿಸುತ್ತಿದ್ದು, ನಿದ್ರೆಯಲ್ಲಿಯೇ ಮೃತರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಂಶಯವಿಲ್ಲ, ಅಬ್ದುಲ್ ಖಾನ್ ಕೆಲವು ದಿನಗಳಿಂದ ವಿಪರೀತ ಮದ್ಯಪಾನದಲ್ಲಿ ತೊಡಗಿಸಿಕೊಂಡಿದ್ದರು. ಜುಲೈ 30 ರಂದು ಬೆಳಗ್ಗೆ 11 ಗಂಟೆಗೆ ಮನೆಯಿಂದ ನಿರ್ಗಮಿಸಿದ ಅಬ್ದುಲ್ ಖಾದರ್ ಖಾನ್, ಆಗಸ್ಟ್ 6 ರಂದು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾನೆ.