ಯಲ್ಲಾಪುರ/ಕಾರವಾರ: ಕಾರವಾರ ಮತ್ತು ಗೋವಾ ಸಂಪರ್ಕಿಸುವ ಮಹತ್ವದ ಕಾಳಿ ಸೇತುವೆ (ರಾಷ್ಟ್ರೀಯ ಹೆದ್ದಾರಿ 66) ಮಂಗಳವಾರ ಮಧ್ಯರಾತ್ರಿಯ ನಂತರ ಕುಸಿದು ಬಿದ್ದಿದೆ. ಈ ಘಟನೆ ಸಂಭವಿಸುವಾಗ ತಮಿಳುನಾಡಿನ ಲಾರಿಯೊಂದು ಸೇತುವೆಯ ಮೇಲೆ ಚಲಿಸುತ್ತಿತ್ತು. ಲಾರಿ ಅಪಘಾತಕ್ಕೀಡಾಗಿ ಮುಳುಗುತ್ತಿದ್ದಾಗ, ಲಾರಿ ಚಾಲಕ ಗಾಜು ಒಡೆದು ಹೊರ ಬಂದಿದ್ದಾನೆ. ಗೋವಾದಿಂದ ಹುಬ್ಬಳ್ಳಿಗೆ ಖಾಲಿ ಲಾರಿ ತೆರಳುತ್ತಿತ್ತು, ಅದರಲ್ಲಿ ಇದ್ದ ಚಾಲಕನನ್ನು ಸ್ಥಳೀಯ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆತನನ್ನು ಕೇರಳದ ರಾಧಾಕೃಷ್ಣನ್ ಎಂದು ಗುರುತಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸೇತುವೆಯನ್ನು ರಸ್ತೆ ಸಂಚಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ನಿರ್ಮಿಸಿ 1986ರಲ್ಲಿ ಸಾರ್ವಜನಿಕ ಬಳಕೆಗಾಗಿ ತೆರೆದಿಡಲಾಗಿತ್ತು. 1986ರವರೆಗೆ ಕಾರವಾರ ಮತ್ತು ಗೋವಾದ ನಡುವಿನ ಸಂಪರ್ಕ ಬಾರ್ಜ್ ಮೂಲಕ ನಡೆಸಲಾಗುತ್ತಿತ್ತು. ಕಾಳಿ ಸೇತುವೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಅನೇಕ ಸಿನೆಮಾದ ಚಿತ್ರೀಕರಣಕ್ಕೂ ಈ ಸೇತುವೆ ಸಾಕ್ಷಿಯಾಗಿದೆ. ಅದರಲ್ಲೂ ಈ ಸೇತುವೆ ಮೇಲೆ ಗೋವಾದಿಂದ ಕಾರವಾರ ಗೋಕರ್ಣಕ್ಕೆ ಆಗಮಿಸುವ ವಿದೇಶಗರು ನಿಂತು ವೀಕ್ಷಿಸಿ ಫೋಟೋ ಕ್ಲಿಕ್ಕಿಸಿ ಸಾಗುತ್ತಿದ್ದರು. ಸಮುದ್ರ ಹಾಗೂ ಕಾಳಿ ನದಿ ಸೇರುವ ಕಾಳಿ ನದಿ ಸೇತುವೆಯ ಮೇಲೆ ಬಹುತೇಕ ಪ್ರವಾಸಿ ವಾಹನಗಳು ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದರು.
ಕೆಲ ವರ್ಷದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಐಆರ್‌ಬಿ ಕಂಪನಿಯು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಹೊಸ ಸೇತುವೆಯನ್ನು ನಿರ್ಮಿಸಿದ್ದರಿಂದ ಹಳೆಯ ಸೇತುವೆ ಮೂಲಕ ಏಕಮುಖ ಸಂಚಾರ ನಡೆಯುತ್ತಿತ್ತು. ಆದರೆ, ಇದೀಗ ಹಳೆಯ ಸೇತುವೆ ಕುಸಿದು ಬಿದ್ದಿರುವುದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ದಟ್ಟಣೆ ಮತ್ತು ಅಸ್ತವ್ಯಸ್ತ ಸ್ಥಿತಿ ಉಂಟಾಗಲಿದೆ.