ಯಲ್ಲಾಪುರ : ಮೀಸಲಾತಿ ಪ್ರಕಟವಾಗಿದ್ದು, ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರವು ಅಧ್ಯಕ್ಷ ಸ್ಥಾನವನ್ನು ‘ಬ’ ವರ್ಗದ ಮಹಿಳೆಗೆ ಮೀಸಲಿಟ್ಟಿದೆ. ಆದರೆ, ಪಟ್ಟಣ ಪಂಚಾಯತ್‌ನಲ್ಲಿ ಈ ವರ್ಗದ ಯಾವುದೇ ಮಹಿಳಾ ಸದಸ್ಯರು ಇಲ್ಲದ ಕಾರಣ ಈ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ.
ಒಟ್ಟು 19 ಸದಸ್ಯರ ಪೈಕಿ ಒಬ್ಬರು ಮೃತಪಟ್ಟಿದ್ದರಿಂದ ಈಗ 18 ಸದಸ್ಯರು ಮಾತ್ರ ಇದ್ದಾರೆ. ಇವರಲ್ಲಿ ಕಾಂಗ್ರೆಸ್ 12 ಮತ್ತು ಬಿಜೆಪಿಯ 5 ಹಾಗೂ ಪಕ್ಷೇತರ ಓರ್ವ ಸದಸ್ಯರಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನ ಸುನಂದಾ ದಾಸ್, ಸತೀಶ ನಾಯ್ಕ, ಪುಷ್ಪಾ ನಾಯ್ಕ, ರಾಜು ನಾಯ್ಕ, ಜನಾರ್ಧನ ಪಾಟಣಕರ, ಗೀತಾ ದೇಶಭಂಡಾರಿ, ನಾಗರಾಜ ಅಂಕೋಲೆಕರ. ಹಲೀಮಾ ಕಕ್ಕೇರಿ, ನರ್ಮದಾ ನಾಯ್ಕ, ಅಮಿತ ಅಂಗಡಿ, ಕೈಸರ್ ಆಲಿ, ಅಬ್ದುಲ್ ಅಲಿ, ಒಟ್ಟು 12 ಸದಸ್ಯರು, ಬಿಜೆಪಿಯಲ್ಲಿ ಸೋಮೇಶ್ವರ ನಾಯ್ಕ, ಶಾಮಿಲಿ ಪಾಟಣಕರ, ಆದಿತ್ಯ ಗುಡಿಗಾರ, ಕಲ್ಪನಾ ಗಜಾನನ ನಾಯ್ಕ, ಜ್ಯೋತಿ ನಾಯ್ಡು ಸೇರಿದಂತೆ 5 ಸದಸ್ಯರು, ಪಕ್ಷೇತರ ಸದಸ್ಯ ರಾಧಾಕೃಷ್ಣ ನಾಯ್ಕ ಸೇರಿ ಒಟ್ಟು 18 ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ‘ಬ’ ವರ್ಗದ ಮಹಿಳಾ ಸದಸ್ಯರಿಲ್ಲದ ಕಾರಣ, ಸರ್ಕಾರದೊಂದಿಗೆ ಕೆಟಗರಿ ಬದಲಾವಣೆಯ ವಿಚಾರ ಪ್ರಸ್ತಾಪಿಸಲಾಗಿದ್ದು, ಈ ಸಮಯದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ.
ಈಗ ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಸರ್ಕಾರದ ಮೀಸಲಾತಿ ಪ್ರಕಾರ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೆ, ಅಧ್ಯಕ್ಷ ಸ್ಥಾನ ಖಾಲಿಯಿರುವ ಕಾರಣ ಉಪಾಧ್ಯಕ್ಷರು ಅಧ್ಯಕ್ಷರ ಕೆಲಸವನ್ನು ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಉಪಾಧ್ಯಕ್ಷ ಸ್ಥಾನ ಬಹಳಷ್ಟು ಮಹತ್ವ ಪಡೆದಿದೆ.
ಈಗ ಎರಡು ಪಕ್ಷಗಳ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿವೆ. ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸರ್ಕಾರವು ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ಕುರಿತು ಕಾರ್ಯ ಚಟುವಟಿಕೆಗಳು ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ. ಸದ್ಯ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿಯವರಾಗಿದ್ದರೂ ಅವರ ಕಾರ್ಯ ಕಾಂಗ್ರೆಸ್ ಪರವಾಗಿರುವುದರಿಂದ ಅವರು ಸೂಚಿಸಿರುವ ಸದಸ್ಯರೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಮುಂದಿನ ಆರ ತಿಂಗಳಿಂದ ಒಂದು ವರ್ಷವರೆಗೆ ಹೆಬ್ಬಾರ್ ವ್ಯಕ್ತಿಯೇ ಆಡಳಿತ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಕೆಲವು ದಿನಗಳಿಗೆ ಕಾಯಬೇಕಾಗಿದೆ.