ಯಲ್ಲಾಪುರ: ಕಳೆದ ಹಲವಾರು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕವು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ತಹಶೀಲ್ದಾರ ಅಶೋಕ ಭಟ್ಟ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
2017ರ ಹೊಸ ನಿಯಮಗಳನ್ನು 2016ರ ಮೊದಲು ನೇಮಕಾತಿಯಾದವರಿಗೆ ಅನ್ವಯಿಸುವುದು ಸರಿಯಲ್ಲ. ಇದರಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಅನ್ಯಾಯಕ್ಕೆ ಒಳಗಾಗುತ್ತಾರೆ. ಅವರಿಗೆ 2016ರ ಹಳೆಯ ನಿಯಮಗಳ ಪ್ರಕಾರವೇ ಪ್ರೌಢಶಾಲೆ ಮತ್ತು ಮುಖ್ಯಗುರುಗಳ ಹುದ್ದೆಗೆ ಬಡ್ತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಾಸಕ ಶಿವರಾಮ ಹೆಬ್ಬಾರ್ ಅವರು ಶಿಕ್ಷಕರ ಮನವಿಯನ್ನು ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸುವ ಭರವಸೆಯನ್ನು ತಹಶೀಲ್ದಾರ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಆರ್. ಭಟ್, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ ತಾಲೂಕ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ತಾಲೂಕ ಶಿಕ್ಷಕರ ಸಂಘದ ಪ್ರಮುಖರಾದ ಗಂಗಾಧರ ಪಟಗಾರ, ಮಾರುತಿ ನಾಯ್ಕ, ಸತೀಶ ನಾಯಕ, ಭಾರತಿ ನಾಯಕ, ಸುವರ್ಣಲತಾ ಪಟಗಾರ, ಸಂತೋಷ್ ನಾಯ್ಕ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸಂಜೀವ್ ಹೊಸ್ಕೇರಿ ಮುಂತಾದವರು ಇದ್ದರು.