ತಹಶೀಲ್ದಾರ ಅಶೋಕ ಭಟ್ ದ್ವಜಾರೋಹಣ ನೆರವೇರಿಸಿ ಮಾತನಾಡಿ, "ಇಂದು ನಾವು ಭಾರತ ದೇಶದ ಸ್ವಾತಂತ್ರ್ಯ ಪಡೆದ ದಿನವನ್ನು ಆಚರಿಸುತ್ತಿದ್ದೇವೆ. ಈ ದಿನ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಯಶಸ್ಸನ್ನು ಗೌರವಿಸುವ ದಿನವಾಗಿದೆ. ಮಹಾತ್ಮ ಗಾಂಧೀಜಿ, ಸುಭಾಷ ಚಂದ್ರ ಭೋಸ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಮತ್ತು ಇನ್ನಿತರ ಅನೇಕ ಹೋರಾಟಗಾರರು ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು.ಈ ದಿನ ನಾವು ನಮ್ಮ ಸಂವಿಧಾನದ ಮೌಲ್ಯಗಳಾದ ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು. ಭಾರತ ಇಂದು ಕೃಷಿ, ಶಿಕ್ಷಣ, ಆರೋಗ್ಯ, ಮಿಲಿಟರಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಆದರೆ ನಾವು ಇನ್ನೂ ಬಡತನ, ಅನಕ್ಷರತೆ, ಲಿಂಗ ಅಸಮಾನತೆ, ಪರಿಸರದ ಅವನತಿ, ವಾಯು ಮಾಲಿನ್ಯ ಮುಂತಾದ ಸವಾಲುಗಳನ್ನು ಎದುರಿಸಬೇಕಿದೆ" ಎಂದರು
"ನಮ್ಮ ಸರಕಾರಗಳು ದೀನ ದಲಿತರ ಕಲ್ಯಾಣ, ಮಕ್ಕಳ ಶಿಕ್ಷಣ, ಆರೋಗ್ಯ, ರೈತರು, ಕೂಲಿಕಾರರು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಲ್ಲಾಪುರ ತಾಲೂಕು ಜಲಪಾತಗಳ ತವರೂರು, ಸಹ್ಯಾದ್ರಿ ಶೃಂಗದಲ್ಲಿ ಬದುಕುತ್ತಿರುವ ನಾವೆಲ್ಲ ಭಾಗ್ಯವಂತರು. ಈ ತಾಲೂಕು ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ, ಅಭಿವೃದ್ಧಿಯ ಚಿಂತಕರಿಗೆ, ಯೋಧರಿಗೆ, ಸಾಧಕರಿಗೆ, ತಂತ್ರಜ್ಞರಿಗೆ ಜನ್ಮ ನೀಡಿದೆ. ಈ ಮಣ್ಣಿಗೆ ಅಪಾರವಾದ ಶಕ್ತಿ ಮತ್ತು ಆತ್ಮಾಭಿಮಾನ ಇದೆ. ಈ ಮಣ್ಣನ್ನು ಹಿಡಿದು ನಾವೆಲ್ಲ ಸುಭದ್ರ ದೇಶ ಕಟ್ಟುವ ಸಂಕಲ್ಪ ಮಾಡೋಣ" ಎಂದು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್, "ಸಾವಿರಾರು ಹೋರಾಟಗಾರರ ಪುಣ್ಯಾತ್ಮರ ಹೊರಾಟ ಬಲಿದಾನದ ಫಲವಾಗಿ ನಾವು 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸುತ್ತಿದ್ದೇವೆ. ಅಹಿಂಸಾತ್ಮಕ ಹೋರಾಟದ ಮೂಲಕ ಸ್ವತಂತ್ರ ಅನುಭವಿಸುತ್ತಿದ್ದೆವೆ. ಆದರೆ ದೇಶದಲ್ಲಿ ಇನ್ನೂ ಸವಾಲುಗಳು ಇವೆ. ದೇಶದ ಪ್ರಗತಿಗಾಗಿ ನಾವು ನಮ್ಮ ಸರ್ಕಾರದೊಂದಿಗೆ ಕೈಜೋಡಿಸಿ" ಎಂದು ಸ್ವತಂತ್ರೋತ್ಸವದ ಶುಭಾಶಯ ಕೋರಿದರು.
ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಶಾಲಾ-ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿದರು.
ಗ್ರೇಡ್ 2 ತಹಶೀಲ್ದಾರ್ ಸಿ.ಜಿ. ನಾಯ್ಕ, ಪೊಲೀಸ್ ನಿರೀಕ್ಷಕ ರಮೇಶ್ ಹಾನಪುರ್, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಪಿಡ್ಬ್ಲೂಡಿ ಎಇಇ ಸಂಜಯ, ಪ್ರಮುಖರಾದ ಪ್ರಮೋದ ಹೆಗಡೆ, ಸುನಂದಾ ದಾಸ್, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ವೇದಿಕೆಯಲ್ಲಿದ್ದರು.