ಯಲ್ಲಾಪುರ : 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಯಲ್ಲಾಪುರ ತಾಲೂಕು ಆಡಳಿತವು ಆಗಸ್ಟ್ 13 ರಂದು ಬೆಳಿಗ್ಗೆ ವಿಶಾಲ ಕಾರ್ಯಕ್ರಮದ ಭಾಗವಾಗಿ ರಾಷ್ಟ್ರಧ್ವಜದ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿತು. ಈ ರ‌್ಯಾಲಿಗೆ ಯಲ್ಲಾಪುರದ ಆಡಳಿತ ಸೌಧದ ಮುಂಭಾಗದಲ್ಲಿ ಅಶೋಕ್ ಭಟ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅಶೋಕ್ ಭಟ್, "ಸ್ವಾತಂತ್ರ್ಯದ 78ನೇ ವರ್ಷಾಚರಣೆಯ ಸಡಗರದ ಅಂಗವಾಗಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಮತ್ತು ಸಾರ್ವಜನಿಕರ ಮೂಲಕ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬೈಕ್ ರ‌್ಯಾಲಿಯನ್ನು ಆಯೋಜಿಸಲಾಗಿದೆ. ಅಗಸ್ಟ್ 15 ನಮ್ಮ ಸ್ವಾಭಿಮಾನದ ಸಂಕೇತದ ದಿನವಾಗಿದೆ. ಈ ರೀತಿಯ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಜನರಲ್ಲಿಯೂ ಸ್ವಾಭಿಮಾನ ಮತ್ತು ಹೆಮ್ಮೆ ಮೂಡಿಸುವ ಮೂಲಕ ತಿಳಿಸಬೇಕಾಗಿದೆ, ಸ್ವತಂತ್ರೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚು ಜನ ಪಾಲ್ಗೊಳ್ಳಬೇಕು ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ" ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ (ಗ್ರೇಡ್ 2) ಸಿ. ಜಿ. ನಾಯ್ಕ, ತಾ.ಪಂ ಪ್ರಭಾರೆ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಬಿಇಓ ಎನ್ ಆರ್ ಹೆಗಡೆ, ಪ.ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್ಐಗಳಾದ ಸಿದ್ದಪ್ಪ ಗುಡಿ ಹಾಗೂ ನಿರಂಜನ್ ಹೆಗಡೆ ಹಾಗೂ ಜಿಪಂ ಇಂಜಿನಿಯರಿಂಗ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಬಂಟ್, ಹಿಂದುಳಿದ ವರ್ಗದ ಇಲಾಖೆಯ ಅಧಿಕಾರಿ ದಾಕ್ಷಾಯಣಿ ನಾಯ್ಕ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.
ಬೆಳಗ್ಗೆ 09.30 ಗಂಟೆಗೆ "ಬೈಕ್ ರ‌್ಯಾಲಿ" ಯನ್ನು ಆಡಳಿತ ಸೌಧದಿಂದ ಪ್ರಾರಂಭಿಸಿ, ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತ - ಬೆಲ್ ರೋಡ್ ಸಂಕಲ್ಪ ಹೊಟೇಲ್ ಕ್ರಾಸ್ ಮಾರ್ಗವಾಗಿ, ಆಡಳಿತ ಸೌಧದಲ್ಲಿ ಮುಕ್ತಾಯಗೊಂಡಿತು.