ಯಲ್ಲಾಪುರ: ಇತ್ತೀಚಿನ ಭಾರೀ ಮಳೆಯಿಂದಾದ ಅನಾಹುತಗಳ ನಡುವೆಯೂ, ಜನರ ಜೀವ ಉಳಿಸಲು ಹತ್ತಾರು ಪ್ರಯತ್ನಗಳು ನಡೆಯುತ್ತಿವೆ. ಆದರೆ, ರಾಷ್ಟ್ರೀಯ ಹೆದ್ದಾರಿ 63 ರಂತಹ ರಸ್ತೆಗಳಲ್ಲಿ ಮುನ್ಸೂಚನೆಯಿಲ್ಲದೆ ಅಪಘಾತ ಸಂಭವಿಸುತ್ತಿದ್ದರೆ, ಈ ಬಗ್ಗೆ ನಿರ್ಲಕ್ಷ ಏಕೇ ಎಂಬುದು ಪ್ರಶ್ನೆಯಾಗಿದೆ.
ಇತ್ತೀಚಿನ ಉದಾಹರಣೆಯೆಂದರೆ, ಯಲ್ಲಾಪುರದಿಂದ ಇಡುಗುಂದಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಇರುವ ಹೆಬ್ಬಾರ್ ಕ್ರಾಸ್ ಬಳಿ, ಲಾರಿಯೊಂದು ಅಪಘಾತಕ್ಕೀಡಾಗುವಷ್ಟು ದೊಡ್ಡ ಹೊಂಡ ಬಿದ್ದಿದ್ದು, ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ರಾಷ್ಟ್ರೀಯ ಹೆದ್ದಾರಿ 63, ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡ ನಂತರ, ಈ ಮಾರ್ಗವು ಅಪಾಯಕಾರಿಯಾಹಿ ಪರಿಣಮಿಸಿದೆ. ಅಪಘಾತದಲ್ಲಿ ಹೆಚ್ಚಿನ ಸಾವಿಗೆ ಕಾರಣವಾಗುತ್ತಿದೆ. ರಸ್ತೆ ಮೇಲಿನ ದುರಸ್ತಿಗೊಂಡಿರುವ ಗುಂಡಿ, ವಿಶೇಷವಾಗಿ ಬೈಕ್ ಸವಾರರು, ಕಾರಿನಂತಹ ಲಘು ವಾಹನ ಚಾಲಕರು ಮತ್ತು ಪ್ರಯಾಣಿಕರ ಯಮಲೋಕಕ್ಕೆ ಆಮಂತ್ರಿಸುತ್ತಿದೆ.
ಪ್ರತಿದಿನ 9 ಸಾವಿರಕ್ಕೂ ಹೆಚ್ಚು ವಾಹನಗಳು ಈ ರಸ್ತೆಯಲ್ಲಿ ಓಡುತ್ತವೆ. ಈ ವಾಹನಗಳಲ್ಲಿ ಅರ್ಧದಷ್ಟು ಬೈಕ್ ಹಾಗೂ ಚಿಕ್ಕಪುಟ್ಟ ವಾಹನಗಳಾಗಿವೆ. ಹೆಬ್ಬಾರ್ ಕ್ರಾಸ್‌ನ ಹೊಂಡದಲ್ಲಿ ಕಾರು ಅಥವಾ ಬೈಕ್ ಸವಾರರು ಒಮ್ಮೆ ಸಿಲುಕಿದರೆ, ತಕ್ಷಣವೇ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುತ್ತಾರೆ. ರಾತ್ರಿಯ ವೇಳೆಯಲ್ಲಿ ಎದುರಿನಿಂದ ಬರುವ ವಾಹನಗಳ ಬೆಳಕಿನಿಂದಾಗಿ, ಹೊಂಡ ಕಾಣದೆ ಅಪಘಾತವು ಸಂಭವಿಸುವ ಸಂಭವ ಹೆಚ್ಚಾಗಿದೆ.
ಇಡಗುಂದಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು, ಹಲವಾರು ಬಾರಿ ದೂರು ನೀಡಿದ್ದಾರೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹೆಬ್ಬಾರ್ ಕ್ರಾಸ್ ಬಳಿ ರಸ್ತೆ ಹೊಂಡಮಯವಾಗಿದೆ. ಚಿಕ್ಕ ಹೊಂಡ ಮುಚ್ಚಿದರೂ, ನಿರಂತರ ಮಳೆಯ ಕಾರಣದಿಂದ ಹೊಂಡ ದೊಡ್ಡದಾಗಿ ಅಪಾಯಕಾರಿಯಾಗಿದೆ. ಜನರು ಅಪಘಾತ ತಪ್ಪಿಸಲು ಹೊಂಡದ ಬಳಿ ಕಟ್ಟಿಗೆ ಇಟ್ಟಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳಿಲ್ಲ. ಇದೊಂದು ವ್ಯವಸ್ಥೆಯ ದುರಂತವಾಗಿದೆ ಎಂದು ಇಡಗುಂದಿ ಗ್ರಾ.ಪಂ ಸದಸ್ಯ ಸತೀಶ ಬಾಳಾ ನಾಯ್ಕ ಹೇಳಿದ್ದಾರೆ.
ಭಾರೀ ಮಳೆಯಿಂದಾದ ನೈಸರ್ಗಿಕ ವಿಪತ್ತಿಗೆ ತುತ್ತಾದ ಜನರ ಬಗ್ಗೆ ನಮ್ಮ ಅನುಕಂಪವಿದೆ. ಆದರೆ, ಮಾನವ ನಿರ್ಮಿತ ದೋಷಗಳಿಂದಾಗಿ ರಸ್ತೆಗಳನ್ನು ನಿರ್ವಹಿಸಲು ವಿಫಲವಾದ ಇಲಾಖೆಯ ನಿರ್ಲಕ್ಷ್ಯದಿಂದ ಜೀವ ತ್ಯಾಗ ಮಾಡುತ್ತಿರುವವರ ಬಗ್ಗೆ ಯಾರು ಮರುಗುವುದು? ಈ ಪ್ರಶ್ನೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಉತ್ತರಿಸಬೇಕು ಅಥವಾ ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು.