ಯಲ್ಲಾಪುರ: ಯಲ್ಲಾಪುರ-ಇಡಗುಂದಿ ಮಾರ್ಗದ ಹೆಬ್ಬಾರ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಬೃಹತ್ ಗುಂಡಿ ಬಿದ್ದಿದ್ದು, ಗುರುವಾರ ಬೆಳಿಗ್ಗೆ ಯಲ್ಲಾಪುರ ನ್ಯೂಸ್ ಇದನ್ನು ವರದಿ ಮಾಡಿತು. ಈ ಸುದ್ದಿ ಪ್ರಕಟವಾದ ಮೂರೇ ಗಂಟೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ವಹಣಾ ಘಟಕವು ತುರ್ತಾಗಿ ಕ್ರಮ ಕೈಗೊಂಡು, ಕಲ್ಲು ಜಲ್ಲಿಗಳಿಂದ ಗುಂಡಿಯನ್ನು ಮುಚ್ಚಿದೆ.
ಹೆಬ್ಬಾರ್ ಕ್ರಾಸ್ ಬಳಿ ಯಲ್ಲಾಪುರದಿಂದ ಇಡಗುಂದಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಈ ಹೊಂಡವನ್ನು ತಕ್ಷಣವೇ ಮುಚ್ಚುವ ಅಗತ್ಯವಿತ್ತು, ಏಕೆಂದರೆ ಲಾರಿಯೊಂದು ಅಪಘಾತಕ್ಕೀಡಾಗುವಷ್ಟು ದೊಡ್ಡ ಹೊಂಡವು ವಾಹನ ಸವಾರರು ಚಾಲಕರಿಗೆ ಅಪಾಯವನ್ನು ಸೃಷ್ಟಿಸಿತ್ತು. ಈ ಹೆದ್ದಾರಿಯಲ್ಲಿ ಬಿದ್ದಿದ್ದ ಗುಂಡಿಗಳಿಂದಾಗಿ ಕಾರು, ಲಘು ವಾಹನಗಳು ಮತ್ತು ಬೈಕ್ ಸವಾರರಿಗೆ ಅಪಾಯಗಳು ಹೆಚ್ಚಾಗುತ್ತಿತ್ತು. ಈ ಕುರಿತು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಬಾಳಾ ನಾಯ್ಕ ಅವರು ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿ, ತಕ್ಷಣವೇ ಸರಿಪಡಿಸುವಂತೆ ಕೇಳಿಕೊಂಡಿದ್ದರು.
ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹೊಂಡ ಇನ್ನಷ್ಟು ಅಗಲ ಮತ್ತು ಆಳವಾಗುತ್ತಿತ್ತು, ಇದು ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಅಪಾಯವನ್ನು ಉಂಟುಮಾಡುತ್ತಿತ್ತು. ಗುರುವಾರ ಬೆಳಿಗ್ಗೆ ಯಲ್ಲಾಪುರ ನ್ಯೂಸ್ ಈ ಕುರಿತು ಸಮಗ್ರವಾದ ವರದಿಯನ್ನು ಪ್ರಕಟಿಸಿ, ಹೆದ್ದಾರಿ ಇಲಾಖೆ ತಮ್ಮ ಜವಾಬ್ದಾರಿಯನ್ನು ತೋರಿಸಬೇಕೆಂದು ವಿನಂತಿಸಿತ್ತು. ವರದಿ ಪ್ರಕಟವಾದ ನಂತರ, ಹೆದ್ದಾರಿ ನಿರ್ವಹಣಾ ಘಟಕದವರು ತಕ್ಷಣವೇ ಕೆಲಸಕ್ಕೆ ತೊಡಗಿ, ಕಲ್ಲು ಜಲ್ಲಿಕಲ್ಲು ಮತ್ತು ಇತರ ವಸ್ತುಗಳಿಂದ ಹೊಂಡವನ್ನು ಮುಚ್ಚಿದ್ದಾರೆ. ವರದಿ ಪ್ರಕಟವಾದ ಮೂರು ಗಂಟೆಗಳಲ್ಲಿ ಈ ಕೆಲಸವನ್ನು ಮುಗಿಸಿದ್ದು, ಸ್ಥಳೀಯರಿಗೆ ತಕ್ಷಣವೇ ನೆಮ್ಮದಿಯನ್ನು ತಂದಿದೆ.