Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Tuesday, 9 July 2024

News: ✒️✒️ ಪತ್ರಿಕೆ ವರದಿಗಾರಿಕೆ ಬಗ್ಗೆ ಆಸಕ್ತಿ ಇದ್ದವರು ತಪ್ಪದೇ‌ ಕೊನೆಯವರೆಗೂ ಓದಿ..News: ✒️✒️ ನಾನು ವರದಿಗಾರ ಜಗದೀಶ, ನನ್ನ ಬಗ್ಗೆ, ಯಲ್ಲಾಪುರ ನ್ಯೂಸ್ ಬಗ್ಗೆ, ಸುದ್ದಿ ಕಳಿಸುವ ಬಗ್ಗೆ ನಿಮ್ಮೊಂದಿಗೆ ನಾಲ್ಕು‌ ಮಾತು.News by: ✒️✒️ ಜಗದೀಶ‌ ನಾಯಕ

ಯಲ್ಲಾಪುರ : ಕರಾವಳಿ‌ ಮುಂಜಾವಿಗೆ ಯಲ್ಲಾಪುರದ ವರದಿಗಾರನಾಗಿ ಪ್ರಾರಂಭಿಸಿ ವರದಿಗಾರಿಕೆಯ ವೃತ್ತಿ ಜೀವನ ಪ್ರಾರಂಭವಾಗಿ 19 ವರ್ಷ ಮುಗಿದಿದೆ. 
   ವರದಿಗಾರಿಕೆ ನನ್ನನ್ನು ಅಮಲಿನಂತೆ ಆವರಿಸಿಕೊಂಡು, ನಾನು ಹಿಂದೆ ಮಾಡುತ್ತಿದ್ದ ಎಲೆಕ್ಟ್ರಾನಿಕ್ಸ್ ವೃತ್ತಿ ಸಂಪೂರ್ಣವಾಗಿ ಕೈ ಬಿಡುವಂತೆ ಮಾಡಿತು. ಕರಾವಳಿ ಮುಂಜಾವಿನ ನಂತರ, ನೂತನ ಟಿವಿ, ಪ್ರಜಾವಾಣಿಯಲ್ಲಿ ಜಿಲ್ಲಾ ಅಸಿಸ್ಟೆಂಟ್ ರಿಪೋರ್ಟರ್, ಧಾರವಾಡದ ನವನಾಡು ದೈನಿಕ, ಕಡಲವಾಣಿ, ಸಂಯುಕ್ತ ಕರ್ನಾಟಕ ಜಿಲ್ಲಾ ಮಾರುಕಟ್ಟೆ ಮ್ಯಾನೇಜರ್, ಇದೀಗ ನುಡಿಜೇನು ದಿನ ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆನೆ. ನನ್ನದೆ ಆದ ಯಲ್ಲಾಪುರ ನ್ಯೂಸ್ (ವೆಬ್ ನ್ಯೂಸ್) ಇದ್ದು, ಕಳೆದ ಎಂಟುವರೆ ವರ್ಷದ ಹಿಂದೆ ಪ್ರಾರಂಭಿಸಿದ ಯಲ್ಲಾಪುರ ನ್ಯೂಸ್ ನನ್ನನ್ನು ಜಿಲ್ಲೆಯಾದ್ಯಂತ ಪರಿಚಯಿಸಿದೆ. ನನ್ನದೇ ಆದ ರೀತಿಯಲ್ಲಿ ಓದುಗರಿಗೆ ಯಾವುದೇ ರೀತಿಯ ಗೊಂದಲ ಆಗದಂತೆ ಮುದ್ರಿತ ಪತ್ರಿಕೆಯನ್ನು ಓದಿದ ರೀತಿಯಲ್ಲಿಯೇ ವೆಬ್ಸೈಟ್ ನ್ನು  ಸ್ವತಃ ನಾನೇ ವಿನ್ಯಾಸ ಮಾಡಿದ್ದೆನೆ. ಓದುಗರು ಸುದ್ದಿ ಓದುವುದರೊಂದಿಗೆ ಜಾಹೀರಾತನ್ನು ಕೂಡ ನೋಡುವ ರೀತಿಯಲ್ಲಿ ವಿನ್ಯಾಸಗೊಳೊಸಲಾಗಿದೆ. 
  ಯಲ್ಲಾಪುರ ನ್ಯೂಸ್ ನಲ್ಲಿ ನನ್ನ ಬಗ್ಗೆ, ಯಲ್ಲಾಪುರ ನ್ಯೂಸ್ ಬಗ್ಗೆ ಎಲ್ಲಿಯೂ ನಾನು ಹೇಳಿಕೊಂಡಿಲ್ಲ. ನನ್ನ ಫೋಟೊವನ್ನು‌ ಬಳಸಿಲ್ಲ, ಯಾರಿಗೂ ದುಂಬಾಲು ಬಿದ್ದು ಜಾಹೀರಾತು ಕೇಳಿಲ್ಲ, ಯಲ್ಲಾಪುರ ನ್ಯೂಸ್ ಗೆ ಜಾಹೀರಾತು ಕೊಟ್ಟವರಿಗೆ ನ್ಯಾಯ ಸಿಕ್ಕಿದೆ ಎನ್ನುವುದು ನನ್ನ ನಂಬಿಕೆ, ಏಕೆಂದರೆ ನಮ್ಮ ಯಲ್ಲಾಪುರ ನ್ಯೂಸ್ ಗೆ ಜಾಹೀರಾತು ಕೊಟ್ಟವರೇ ಪದೇಪದೇ ಜಾಹಿರಾತು ನೀಡುವುದರ ಮೂಲಕ ತಮ್ಮ ವ್ಯಾಪಾರ ವಹಿವಾಟನ್ನು ಹೆಚ್ಚು ಮಾಡಿಕೊಂಡಿದ್ದಾರೆ.   ಬಾಡಿಗೆ ಮನೆ, ಆಸ್ತಿ ಮಾರಾಟ, ಮನೆ ಮಾರಾಟ, ಉದ್ಯೋಗಿಗಳು ಅಗತ್ಯತೆ, ಅಂಗಡಿಗಳೇ ಜಾಹೀರಾತುಗಳು ಜಾಹೀರಾತು ನೀಡಿದವರಿಗೆ ನ್ಯಾಯ ಒದಗಿಸಿದೆ ಎನ್ನುವುದು ನನ್ನ ಸಮಾದಾನ. ಅತೀ ಹೆಚ್ಚು ಓದಿರುವ ಯಲ್ಲಾಪುರ ನ್ಯೂಸ್ ಸುದ್ದಿ ಯಲ್ಲಾಪುರ ಗ್ರಾಮದೇವಿ ಜಾತ್ರೆ ಹಾಗೂ ಶಿರಸಿ ಮಾರಿಕಾಂಭಾ ಜಾತ್ರೆಯ ಸುದ್ದಿಗಳು. ಓದುಗರ ಸಂಖ್ಯೆ 1.5 ಲಕ್ಷಕ್ಕೂ‌ ಹೆಚ್ಚಿತ್ತು, ಕ್ರೈಂ, ರಾಜಕೀಯ, ತನಿಖಾತ್ಮಕ ಸುದ್ದಿಗಳನ್ನು‌ 6 ತಾಸಿನಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಓದುತ್ತಾರೆ. ವಾರದಲ್ಲಿ 80 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ಜನ ಓದುತ್ತಾರೆ. 

ನನ್ನ ವೃತ್ತಿ ಜೀವನ :

   ನನ್ನ ವೃತ್ತಿ ಜೀವನದಲ್ಲಿ ನನ್ನನ್ನು ಪ್ರೋತ್ಸಾಹಿಸಿದವರು ಬಹಳಷ್ಟು ಜನ ಇದ್ದಾರೆ. 18 ವರ್ಷದ ಹಿಂದೆ ಕರಾವಳಿ ಮುಂಜಾವಿನಿಂದ ಪ್ರಾರಂಭಿಸಿದಾಗ ನಾನಿನ್ನು ಅಂಗನವಾಡಿ ಕೂಸು, ಕಲಿಯಬೇಕು ಇನ್ನಷ್ಟು ವಿಷಯವನ್ನು ಗ್ರಹಿಸಿಕೊಂಡು  ಬಹಳಷ್ಟು ವಿಷಯವನ್ನು ಅರಿತುಕೊಂಡು ಇನ್ನಷ್ಟು ಉತ್ಕೃಷ್ಟ ಹೊಸ ಸುದ್ದಿಯನ್ನು  ಕೊಡಬೇಕು ಎನ್ನುವ ಉತ್ಕಟ ಇಚ್ಚೆ ಇತ್ತು. ಹೀಗಾಗಿ ಈ ಕ್ಷೇತ್ರದಲ್ಲಿ ನಾನು ಇನ್ನೂ ಕೂಡ ಒಬ್ಬ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದೆನೆ. 
   ನನಗೆ ವರದಿಗಾರಿಕೆ ವೃತ್ತಿಗೆ ಸೇರಿಸಿರುವುದು ವರ್ಷಾ ಸ್ಟುಡಿಯೋ ಪ್ರಕಾಶ ಕಟ್ಟಿಮನಿ, ಅಂದು‌ ಅವರು ಫೋಟೊ, ಸುದ್ದಿ ಸಂಗ್ರಹ, ಕಂಪ್ಯೂಟರ್ ಸೇರಿದಂತೆ ಬಹಳಷ್ಟು ಸಹಾಯ ಮಾಡಿದ್ದಾರೆ. ಪ್ರಾರಂಭದ ದಿನದಲ್ಲಿ ನನ್ನನ್ನು ಪ್ರೋತ್ಸಾಹಿಸಿದವರು ಅಂದಿನ ಹೊಸದಿಗಂತ ವರದಿಗಾರ ಉಮಾಮಹೇಶ್ವರ ಭಟ್, ಅಂದಿನ ಪ್ರಜಾವಾಣಿ ವರದಿಗಾರರಾಗಿದ್ದ ಶ್ರೀರಂಗ ಕಟ್ಟಿ ಸರ್, ಅಂದಿನ ವಿಜಯ ಕರ್ನಾಟಕ ವರದಿಗಾರ ಎಂ ರವೀಂದ್ರ, ಈಗಲೂ ಪತ್ರಿಕಾ ವರದಿಗಾರರಾಗಿರುವ ಶಂಕರ ಭಟ್ಟ ತಾರೀಮಕ್ಕಿ, ನರಸಿಂಹ ಸಾತೋಡಿ, ಸುಬ್ರಾಯ ಬಿದ್ರೆಮನೆ, ವಿ ಜಿ ಗಾಂವ್ಕರ್,  ಕೆಎಸ್ ಭಟ್ ಇವರೆಲ್ಲ ನನಕ್ಕಿಂತ ಸಿನಿಯರ್, ಅವರ ಪ್ರೋತ್ಸಾಹ ಹಾಗೂ ಅವರದೇ ಸುದ್ದಿಯ ಅನುಕರಣೆ ನನಗೆ ಈವರೆಗೂ ಬೆಳೆಯಲು ಪ್ರೇರಣೆಯಾಗಿದೆ. ನಂತರ ಬಂದ ನಾಗರಾಜ ಮದ್ಗುಣಿ, ದತ್ತಾತ್ರೇಯ ಕಣ್ಣಿಪಾಲ್, ಶ್ರೀಧರ್ ಅಣಲಗಾರ, ಸತೀಶ ಮಾಗೋಡ, ಪ್ರಭಾ ಜಯರಾಜ, ಜಯರಾಜ ಸಹಾಯ ಸಹಕಾರ ನೀಡಿದ್ದಾರೆ. ಹೊಂದಾಣಿಕೆಯ ಮೂಲಕ ಸುದ್ದಿಗಳನ್ನು ಶೇರ್ ಮಾಡಿಕೊಳ್ಳುತ್ತೇವೆ.

ವರದಿಗಾರ ಎಂಬ ಅಹಂ ನನಗಿರಲಿಲ್ಲ :

    ಇಷ್ಟು ದಿನದ ವರದಿಗಾರಿಕೆಯಲ್ಲಿ ಎಂದಿಗೂ ನಾನೊಬ್ಬ ವರದಿಗಾರ ಎಂದು ಎಲ್ಲಿಯೂ ಶೋ ಮಾಡಿಕೊಂಡಿಲ್ಲ. ಹತ್ತಾರು ಜನರ ಮುಂದೆ ಕ್ಯಾಮೇರಾ ಮೊಬೈಲ್ ಅಲುಗಾಡಿಸಿಲ್ಲ. ಮುಂದೆಯೂ ಹಾಗೆ ಮಾಡಿಕೊಳ್ಳುವುದಿಲ್ಲ.
ನಾನು ಬಾರ್ ಅಥವಾ ಹೋಟೆಲ್ ಗೆ ಡ್ರಿಂಕ್ಸ್ ಗಾಗಿ ಹೋದಾಗ ಅಕ್ಕಪಕ್ಕದ ಟೇಬಲ್ ನವರು ನಾನೊಬ್ಬ ವರದಿಗಾರ ಎಂದು ಇನ್ನಿತರರಿಗೆ ಪರಿಚಯಿಸುವುದು ನನಗೆ ಇಷ್ಟ ಇರಲಿಲ್ಲ, ಹೀಗಾಗಿ ಹೋಟೆಲ್ ಹಾಗೂ ಬಾರ್ ಗಳಿಗೆ ಹೋಗುವುದನ್ನು ಬಹಳಷ್ಟು ವರ್ಷದ ಹಿಂದಿನಿಂದ ಬಿಟ್ಟು ಬಿಟ್ಟಿದ್ದೇನೆ. ಕುಡಿಯುವ ಮನಸ್ಸು ಬಂದರೆ ಮನೆಗೆ ತರಸಿ ಕುಡಿಯುತ್ತೇನೆ. ಎಣ್ಣೆ ಸ್ವಲ್ಪ ಹೆಚ್ಚಾದಾಗ ನಾನು ಮಾತನಾಡುವ ಏರು ದ್ವನಿ ನಮ್ಮ ಮನೆಯ ನಾಲ್ಕು ಗೋಡೆಯ ಮಧ್ಯದಲ್ಲಿ ಅಡಗಿ ಹೋಗುತ್ತದೆ. ಹೊರಗಿನವರೊಂದಿಗೆ ಗೌಜಿ ಗದ್ದಲ ಆಗುವುದಿಲ್ಲ. ಹಗಲಿನಲ್ಲಿ ಏನಾದರೂ ಸ್ವಲ್ಪ ಎಣ್ಣೆ ಕುಡಿದರೂ ಕೂಡ ನಾನು ಯಾವುದೇ ಸುದ್ದಿಯನ್ನು ಮಾಡುವುದೇ ಇಲ್ಲ. ಇದು ಬಹಳಷ್ಟು ಜನ ಯಲ್ಲಾಪುರ ನ್ಯೂಸ್ ಓದುಗರಿಗೆ ತಿಳಿದಿದೆ.

ವರದಿಗಾರಿಕೆಯಿಂದ ಕಲಿತ ಕೆಟ್ಟ ಗುಣ :

    ಹಲವಾರು ಜನರಿಂದ ಕಲಿತ ಒಂದು ಕೆಟ್ಟ ಗುಣ ನನಗೆ ಆವರಿಸಿದೆ. ಮೊದಲಾದರೇ ಸ್ಥಳದಲ್ಲಿಯೇ ವಿರೋಧ ವ್ಯಕ್ತ ಪಡಿಸುತ್ತಿದ್ದೆ. ಈಗ ಹಾಗಲ್ಲ ತಾಳ್ಮೆ ವಹಿಸುತ್ತೆನೆ. ಕಳೆದ ಕೆಲವು ವರ್ಷದಿಂದ ನನಗೆ ಬಹಳಷ್ಟು ತಾಳ್ಮೆ ಹೆಚ್ಚಿದೆ. ಹಾಗೆಯೇ ಸೇಡಿನ ಗುಣ ಬೆಳೆದು ಬಂದಿದೆ. ನನ್ನನ್ನು ನಮ್ಮ ಕುಟುಂಬದವರನ್ನು, ನನ್ನ ಆತ್ಮೀಯ ಪ್ರೇಂಡ್ಸ್ ಗಳನ್ನು ಅವಮಾನಿಸಿದವರಿಗೆ, ನನಗೆ, ನಮ್ಮವರಿಗೆ ತೊಂದರೆ ಕೊಟ್ಟವರ ವಿರುದ್ದ, ಸೇಡು ತೀರಿಸಿಕೊಳ್ಳುವವರೆಗೆ ನನಗೆ ಸಮಾಧಾನ ಇರುವುದಿಲ್ಲ. ನನ್ನ ತಾಳ್ಮೆ ಸೇಡು ತೀರಿಸಿಕೊಳ್ಳುವವರೆಗೂ ಕೆಲಸ‌ ಮಾಡುತ್ತದೆ. 
ಆಗ ನನ್ನ ಇಮೇಲ್ ಜಿಲ್ಲೆಯ, ರಾಜ್ಯದ, ರಾಷ್ಟ್ರದ ಹಲವು ಇಲಾಖೆಗಳು, ಆಧಿಕಾರಿಗಳು, ಜನಪ್ರತಿನಿಧಿಗಳ ಕಂಪ್ಯೂಟರಿಗೆ ಹೋಗಿ ತಟ್ಟುತ್ತದೆ. ಎಂದಿಗೂ ಕೂಡ ಹೆಸರು ವಿಳಾಸ ಇಲ್ಲದ ಮೂಕರ್ಜಿ ಬರೆದಿಲ್ಲ. ನನ್ನ ಸಂಪೂರ್ಣ ವಿಳಾಸ ಆಧಾರ್ ಕಾರ್ಡ್ ಜೊತೆಗೆ ನನ್ನ ಇಮೇಲ್ ಹೋಗಿರುತ್ತದೆ. ಕ್ರಮವೂ ಆಗಿದೆ. ಬಿಸಿಯೂ ತಟ್ಟಿದೆ.

ಇನ್ನೂ ಹಿಂದೆ ಸುದ್ದಿ ಹೇಗೆ ಕಳಿಸಲಾಗುತ್ತಿತ್ತು, ನಮಗೆ ಹೇಗೆ‌ ಸುದ್ದಿ ಸಿಗುತ್ತಿತ್ತು ಎನ್ನುವುದರ ಕಡೆಗೆ ; 

ಬಸ್ ನಿಲ್ದಾಣದ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತಿದ್ದ ಸುದ್ದಿ :

18 ವರ್ಷದ ಹಿಂದೆ, ಬಸವೇಶ್ವರ ವೃತ್ತದ ಚೇತನಾ‌ ಪ್ರೆಸ್‌ನಲ್ಲಿ‌ ನಂತರ ಯಲ್ಲಾಪುರ ಹಳೆ ಬಸ್ ನಿಲ್ದಾಣದಲ್ಲಿ ಸುಮಾರು 11 ವರದಿಗಾರರ ಚಿಕ್ಕ ಚಿಕ್ಕ ಬಾಕ್ಸಗಳಿದ್ದವು.
ಈ ಬಾಕ್ಸ್ ಗಳಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಕಾರ್ಯಕ್ರಮ ನಡೆದ ನಂತರ ಕೈಯಲ್ಲಿ ಬರೆದ ಸುದ್ದಿಯೇ ಜೆರಾಕ್ಸ್ ಹಾಗೂ ಒಂದು ಫೋಟೋ, ಹೆಸರು ವಿಳಾಸ ಇಲ್ಲದೆ ಮಾಡಬಹುದಾದ ಮೂಕರ್ಜಿಯಂತಹ ಸುದ್ದಿ ಅಥವಾ ಆರೋಪಗಳ ಬಗ್ಗೆ ಸುದ್ದಿ ಸಂಗ್ರಹವಾಗುತ್ತಿತ್ತು. ಪ್ರತಿದಿನ 10 ರಿಂದ 15 ಆಮಂತ್ರಣ ಪತ್ರಿಕೆ, ಸುದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇರುತ್ತಿತ್ತು. ಪ್ರತಿದಿನ ಮಧ್ಯಾಹ್ನ 3 ಗಂಟೆಯ ಸುಮಾರು ಬಹುತೇಕ ಎಲ್ಲ ವರದಿಗಾರರು ತಮ್ಮ ಪೆಟ್ಟಿಗೆಯಲ್ಲಿ ಇದ್ದ ಸುದ್ದಿಯನ್ನು ಸಂಗ್ರಹಿಸಿ ತಮ್ಮ ಕಚೇರಿಗೆ ತೆರಳಿ ಸುದ್ದಿಗಳನ್ನು ಮಾಡಿ ಪತ್ರಿಕೆಗೆ ರವಾನಿಸುತ್ತಿದ್ದರು.

ಹಿಂದೆ ಪತ್ರಿಕಾ ಕಚೇರಿಗೆ ಸುದ್ದಿ ಕಳಿಸುವ ವ್ಯವಸ್ಥೆ ಹೇಗಿತ್ತು ?

    ಆ ಸಮಯದಲ್ಲಿ ಇಮೇಲ್ ನಂತಹ ವ್ಯವಸ್ಥೆ ಇರಲಿಲ್ಲ, ಬಹುತೇಕ ಬಹಳಷ್ಟು ಜನರಿಗೆ ಕಂಪ್ಯೂಟರ್ನಲ್ಲಿ ಟೈಪಿಂಗ್ ಮಾಡಲು ಬರುತ್ತಿರಲಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಪ್ರಾರಂಭವೇ ಆಗಿರಲಿಲ್ಲ. ಹೀಗಾಗಿ ನಾವು ಸುದ್ದಿಯನ್ನು ಬರೆದು ಅದನ್ನು ಕವರನಲ್ಲಿ ಹಾಕಿ, ಹುಬ್ಬಳ್ಳಿ, ಕಾರವಾರ, ಶಿರಸಿ ಕಡೆಗೆ ಹೋಗುವ ಬಸ್ಸಿನ ಚಾಲಕನ ಹತ್ತಿರ ಕಳಿಸಿಕೊಡಬೇಕಾಗಿತ್ತು. ನಂತರ ಬಂದಿರುವುದು ಪ್ಯಾಕ್ಸ್, ಈ ಪ್ಯಾಕ್ಸ್ ಯಂತ್ರ ಇಲ್ಲಿಯ ಎಲ್ಲ ವರದಿಗಾರರ ಕಡೆ ಇರಲಿಲ್ಲ. ಎಸ್ ಟಿ ಡಿ ಸೆಂಟರ್ ತೆರಳಿ ನಮ್ಮ ವರದಿಯ ಹಾಳೆಯನ್ನು ನಮ್ಮ ಪತ್ರಿಕಾ ಕಚೇರಿಗೆ ಫ್ಯಾಕ್ಸ್ ಮಾಡಬೇಕಾಗಿತ್ತು. ಪ್ಯಾಕ್ಸ್ ನಲ್ಲಿ ಅಸ್ಪಷ್ಟವಾದ ಮುದ್ರಣವಾಗಿದ್ದರೆ ಮತ್ತೆ ಮತ್ತೆ ಫ್ಯಾಕ್ಸ್ ಮಾಡಬೇಕಾಗಿತ್ತು. ನಂತರ ಬಂದಿದ್ದು ಕಂಪ್ಯೂಟರ್, ಕಂಪ್ಯೂಟರ್ ಇದ್ದರೂ ಕೂಡ ಇಂಟರ್ನೆಟ್ ಕನೆಕ್ಷನ್ ಇರಲಿಲ್ಲ. ಪೆನ್ ಡ್ರೈವ್ ಅಥವಾ ಸಿಡಿಯಲ್ಲಿ ನಮ್ಮ ಸುದ್ದಿ ಹಾಗೂ ಫೋಟೋಗಳನ್ನು ಹಾಕಿ ಇಂಟರ್ನೆಟ್ ಸಂಪರ್ಕ ಇರುವ ಸೈಬರ್ ಸೆಂಟರ್ ಗೆ ಹೋಗಿ ಅಲ್ಲಿಂದ ಇಮೇಲ್ ಮಾಡಬೇಕಿತ್ತು. ಇಂದು ಕಾಲ ಬದಲಾಗಿದೆ.
ಈಗ ಪ್ರತಿಯೊಬ್ಬ ವರದಿಗಾರರು, ಸ್ಥಳೀಯ ಸಂಘ ಸಂಸ್ಥೆಗಳು, ಸರಕಾರಿ, ಖಾಸಗಿ ಕಚೇರಿ, ನೌಕರರು ಹತ್ತಿರ ಕಂಪ್ಯೂಟರ್, ಆಂಡ್ರಾಯ್ಡ್ ಮೊಬೈಲ್, ಬ್ರಾಡ್ ಬ್ಯಾಂಡ್ 4ಜಿ 5ಜಿ‌ ಮೊಬೈಲ್ ಇಂಟರ್‌ನೆಟ್ ಸಂಪರ್ಕ ಇದೆ. ಅದರಲ್ಲಿ ಇಮೇಲ್ ಇದೆ, ವಾಟ್ಸಪ್ ಇದೆ, ಸ್ಥಳದಿಂದಲೇ ಸುದ್ದಿಯನ್ನು ಟೈಪ್ ಮಾಡಿ ಆಗಿಂದಾಗಲೇ ಪತ್ರಿಕಾ ವರಸಿಗಾರರಿಗೆ ಕಚೇರಿಗೆ ಅದೇ ಮೊಬೈಲ್ ನಲ್ಲಿ ತೆಗೆದ ಫೋಟೋ ಜೊತೆಗೆ ಕಳಿಸಬಹುದಾಗಿದೆ.

ನಮಗೆ ವರದಿಗಾರರಿಗೆ ವಾಟ್ಸಪ್ ಯುಗದಲ್ಲಿಯೂ ಸುದ್ದಿಯ ಕೊರತೆಯಾಗುತ್ತಿದೆ :

  ವಾಟ್ಸಪ್ ಯುಗದಲ್ಲಿಯೂ ವರದಿಗಾರರಿಗೆ ಸುದ್ದಿಯ ಕೊರತೆಯಾಗುತ್ತಿದೆ. ಹಿಂದೆ ಬಾಕ್ಸ್ ಗೆ ಬಂದು ಬೀಳುತ್ತಿದ್ದ ಸುದ್ದಿಗಳ ಸಂಖ್ಯೆ ಹೆಚ್ಚಿತ್ತು. ಈಗ ವಾಟ್ಸಪ್ ಮೂಲಕ ಕಳಿಸಬಹುದಾದರೂ ಯಾರೂ ಕಳಿಸುತ್ತಿಲ್ಲ. ಕಳಿಸಿದರು ಕಾರ್ಯಕ್ರಮ ಮುಗಿದ ಮೂರು ನಾಲ್ಕು ದಿನದ ನಂತರಕಳಿಸುತ್ತಾರೆ, ಈಗಿನ‌ ಕಾಲಕ್ಕೆ ಅದು ಹಳಸಲು ಸುದ್ದಿ, 

ಸಾರ್ವವಜನಿಕರು ವರದಿಗಾರರಿಗೆ ಹೇಗೆ ಸುದ್ದಿ ಕಳಿಸುವುದು ?

  ಸುದ್ದಿ ಕಳಿಸುವವರು, ಒಂದು ಬಿಳಿ ಹಾಳೆಯ ಮೇಲೆ ಕಪ್ಪು ಬಣ್ಣದ ಬಾಲ್ ಪೆನ್ನಿನಿಂದ ದಪ್ಪ ಅಕ್ಷರದಲ್ಲಿ ಸುದ್ದಿಯನ್ನು ಸ್ಪಷ್ಟವಾಗಿ ಬರೆದು ಅದನ್ನು ಬೆಳಕಿನಲ್ಲಿಟ್ಟು ಮೊಬೈಲ್ ಮೇಲೆ ಹಿಡಿದು, ಅಕ್ಷರಗಳು ಪೋಕಸ್ ಆಗುವವರೆಗೂ ಕಾದು‌ ನಂತರ ಫೋಟೋ ತೆಗೆದು ಪೇಜ್ ನಂಬರ್ ಹಾಕಿ ಒಂದು ಎರಡು ಅಥವಾ ಮೂರು ಪೇಜ್ ಗಳಲ್ಲಿ ಕಾರ್ಯಕ್ರಮದ ಉದ್ಘಾಟನೆ ಉದ್ಘಾಟಕರ ಮಾತಿನ ಫೋಟೋ ಜೊತೆಗೆ ಕಳಿಸಿಕೊಟ್ಟರೆ ಕಾರ್ಯಕ್ರಮದ ಮುಗಿದ ಮಾರನೇ ದಿನವೇ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ ಆನ್ಲೈನ್ ಪತ್ರಿಕೆಗಳಲ್ಲಿ ಅದೇ ದಿನ ಸುದ್ದಿ ಪ್ರಕಟವಾಗುತ್ತದೆ.  ಎಲ್ಲ ವರದಿಗಾರರಿಗೂ ಒಂದೇ ಬಾರಿ ಕಳಿಸುವ ವಾಟ್ಸಪ್ ನಂತಹ ಅನುಕೂಲಕರ ವ್ಯವಸ್ಥೆ ಇದ್ದಾಗಲೂ ಕೂಡ ಬಹಳಷ್ಟು ಜನ ಒಂದು ಎರಡು ಮೂರು ದಿನ ಬಿಟ್ಟು  ಕಾರ್ಯಕ್ರಮದ ಸುದ್ದಿಯನ್ನು ಕಳಿಸುತ್ತಿದ್ದಾರೆ. 

ಸೆಲ್ಪಿ‌ ಫೋಟೊ ಕಳಿಸಬೇಡಿ ;

       ಕಾರ್ಯಕ್ರಮದ ಉದ್ಘಾಟನೆ, ಉದ್ಘಾಟಕರು ಮಾತನಾಡುತ್ತಿರುವುದು, ಅಧ್ಯಕ್ಷರು ಅಥವಾ ಉಪನ್ಯಾಸಕರು ಮಾತನಾಡುವ ಫೋಟೋಗಳನ್ನು ಅಷ್ಟೇ ಕಳಿಸಿದರೆ ಉತ್ತಮ.

ಕಾರ್ಯಕ್ರಮದಲ್ಲಿ ಸೆಲ್ಫಿ ಫೋಟೋಗಳನ್ನು ಯಾವ ಪತ್ರಿಕೆಯು ಪ್ರಕಟಿಸುವುದಿಲ್ಲ. ಹಾಗೆ ಒಂದು ವೇಳೆ ಪ್ರಕಟಿಸಿದರು ಸೆಲ್ಫಿ ತೆಗೆದವರ ಮುಖದ ಭಾಗವನ್ನು ಕಟ್ ಮಾಡಿ ಉಳಿದ ಭಾಗವನ್ನು ಅಷ್ಟೇ ಪ್ರಕಟ ಮಾಡಲಾಗುತ್ತದೆ ಎನ್ನುವುದು ನೆನಪಿರಲಿ. ಕಾರ್ಯಕ್ರಮದ ಫೋಟೋಗಳು ಲ್ಯಾಂಡ್ಸ್ಕೇಪ್ ನಲ್ಲಿರಲಿ. ಅಂದರೆ ಸಿನಿಮಾಸ್ಕೋಪ್ ರೀತಿಯಲ್ಲಿ. ಪೊರ್ಟೈಟ್ ಪೋಟೊಗಳು ಅರ್ಧ ಆಕಾಶ, ಹಂಚು, ಅರ್ಧ ಭೂಮಿ ಮಧ್ಯದಲ್ಲಿ ಮಾತ್ರ ಕೆಲವು ಜನ ಅಷ್ಟೇ ಕಾಣಿಸುತ್ತದೆ. ಇಂತಹ ಫೋಟೋಗಳು ಬಹಳ ಸಲ ರಿಜೆಕ್ಟ್ ಆಗಿ ಕೇವಲ ಸುದ್ದಿಯಷ್ಟೇ ಬರುತ್ತದೆ ಎನ್ನುವುದನ್ನು ನೆನಪಿಡಿ. 
 
ಎಂತಹ ಸುದ್ದಿ ಪ್ರಕಟವಾಗುತ್ತದೆ ?, ವೈಯಕ್ತಿಕ ಹಿತಾಸಕ್ತಿಯ ಸುದ್ದಿ‌ ಪ್ರಕಟ ಆಗುವುದಿಲ್ಲ :

   ಸಾಮಾಜಿಕ ಹಿತ ಇದ್ದಾಗ ಮಾತ್ರ ನಾವು ವರದಿಗಾರರು ವರದಿ ಮಾಡುತ್ತೇವೆ. ಇಬ್ಬರು ವ್ಯಕ್ತಿಗಳು, ಎರಡು ಅಥವಾ ಹಲವು ಕುಟುಂಬದ ಮಧ್ಯದ, ಆಸ್ತಿ ವಿವಾದ, ಕೌಟುಂಬಿಕ ವಿವಾದ, ವೈಯಕ್ತಿಕ ವಿಚಾರಗಳನ್ನು ನಾವು ಸುದ್ದಿ ಮಾಡುವುದಿಲ್ಲ. ಇಂತಹ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆರಕ್ಷಕ ಇಲಾಖೆ ಇದೆ. ನ್ಯಾಯಾಲಯ ಇದೆ. ಅಲ್ಲಿ ನೀವು ಬಗೆಹರಿಸಿಕೊಳ್ಳಬಹುದು. ಇಂತಹ ವಿಷಯಗಳು ಪತ್ರಿಕೆಯಲ್ಲಿ ಬಂದಾಗ ನ್ಯಾಯ ಸಿಗುತ್ತದೆ ಎನ್ನುವುದು ತಪ್ಪು ಅಭಿಪ್ರಾಯ. ಇಂತಹ ವರದಿ ಪ್ರಕಟವಾದಾಗ ಯಾವುದೋ ಒಬ್ಬ ವ್ಯಕ್ತಿಯ ತೇಜೋವಧೆ ಆಗುತ್ತದೆ, ತೇಜೊವಧೆಗೆ ನಾವು ಹೊಣೆ ಹೊರಬೇಕಾಗುತ್ತದೆ.  ಏಕೆಂದರೆ ನಾವು ನ್ಯಾಯ ನಿರ್ಣಯ ಮಾಡುವವರು‌ ನಾವು ವರದಿಗಾರರಲ್ಲ.

ಕೊನೆಯ ಮಾತು :

   ನಾನು ನನ್ನ ಬಗ್ಗೆ, ನನ್ನ ಈ ವೃತ್ತಿ ಜೀವನ ಪ್ರಾರಂಭವಾದ ಬಗ್ಗೆ, ಅದಕ್ಕೆ ಸಹಾಯ ಮಾಡಿದವರು, ಪ್ರೋತ್ಸಾಹಿಸಿದವರ ಬಗ್ಗೆ, ಅಂದು ಸುದ್ದಿ ಹೇಗೆ ಕಳಿಸುತ್ತಿದ್ದರು ಎಂದು ಹೇಗೆ ಕಳಿಸಬಹುದು ಎನ್ನುವುದರ ಕುರಿತು ಸ್ವಲ್ಪ ವಿಸ್ತಾರವಾಗಿಯೇ ಬರೆದಿದ್ದೇನೆ. ಬಹಳಷ್ಟು ಜನರಿಗೆ ತಮ್ಮ ಕಾರ್ಯಕ್ರಮದ ವರದಿಯನ್ನು ವರದಿಗಾರರಿಗೆ ಕಳಿಸಲು ಇದರಿಂದ ಅನುಕೂಲವಾಗಲಿದೆ ಎಂದು ಭಾವಿಸಿದ್ದೇನೆ. ಯಲ್ಲಾಪುರದಲ್ಲಿ ಇರುವವರು ಬಹುತೇಕ ಎಲ್ಲರೂ ಪ್ರಾಮಾಣಿಕ ಪತ್ರಕರ್ತರು. ಸುದ್ದಿ ಪ್ರಕಟ ಮಾಡಲು ಯಾರು ಕೂಡ ದುಡ್ಡು ಕೇಳುವುದಿಲ್ಲ. ಆದರೆ ಜಾಹೀರಾತು ನೀಡಿದರೆ ಮಾತ್ರ ಹಣ ನೀಡಬೇಕಾಗುತ್ತದೆ. ಇದನ್ನು ಕೂಡ ನಮ್ಮ ಓದುಗರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕೆ, ಯಲ್ಲಾಪುರ ನ್ಯೂಸ್, ವರದಿಗಾರಿಕೆ ಬಗ್ಗೆ ಮಾತನಾಡಿದ್ದೆನೆ. ಮತ್ತೆ ಈ ವಿಷಯ ಪ್ರಸ್ತಾಪಿಸುವುದಿಲ್ಲ. ನಮಸ್ಕಾರ.