Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Sunday, 21 July 2024

News: ✒️✒️ ** ಶಿರೂರು ಮುಳುಗಿದ ಗ್ಯಾಸ್ ಟ್ಯಾಂಕರ್ ಮೇಲೆತ್ತಿ ತಂದ ಯಲ್ಲಾಪುರದ‌ ಇಮ್ರಾನ್ ಸನದಿ ತಂಡNews by: ✒️✒️ ಜಗದೀಶ‌ ನಾಯಕ

ಯಲ್ಲಾಪುರ : ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಗುಡ್ಡ ಕುಸಿತದಲ್ಲಿ ಗಂಗಾವಳಿ ನದಿಗೆ ಕೊಚ್ಚಿ ಹೋದ ತುಂಬಿದ ಎಲ್‌ಪಿ‌ಜಿ ಗ್ಯಾಸ್ ಟ್ಯಾಂಕರನ್ನು ಯಲ್ಲಾಪುರದ ಕ್ರೇನ್ ಆಪರೇಟರ್ ಇಮ್ರಾನ್ ಸನದಿ, ಜಿಲ್ಲೆಯ ಇನ್ನಿತರ ಕ್ರೇನ್ ಆಪರೇಟರ್ ಹಾಗೂ ಅನುಭವಿ ಕೆಲಸಗಾರರ ಸಹಾಯದಿಂದ ಗಂಗಾವಳಿ ಹೊಳೆಯ ಮಧ್ಯದ ಎರಡು ನೂರು ಮೀಟರ್ ದೂರದಿಂದ ಸುರಕ್ಷಿತವಾಗಿ ದಡಕ್ಕೆ ತಲುಪಿಸಿರುವ ರೋಚಕ ಕಥೆ ನಿಮ್ಮ ಮುಂದೆ.
 ಜುಲೈ 16ರಂದು ಬೆಳಿಗ್ಗೆ ಶಿರೂರ್ ಗುಡ್ಡ ಕುಸಿತವಾಗಿ ರಾಷ್ಟ್ರೀಯ ದಾರಿಯ ಮೇಲೆ ನೂರಾರು ಮೀಟರ್ ಮಣ್ಣು ತುಂಬಿ ಅಲ್ಲಿರುವ ವಾಹನಗಳು ಕೊಚ್ಚಿ ಹೋಗುತ್ತವೆ. ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಶಿರೂರು, ಗಂಗಾವಳಿ ಹೊಳೆಯಲ್ಲಿ ಕೊಚ್ಚಿ ಹೋಗಿ 7-8 ಕಿ.ಮೀ ದೂರದ ಸಗಡಗೇರಿ ಗ್ರಾಮದವರೆಗೆ ನದಿಯಲ್ಲಿ ತೇಲಿಕೊಂಡು ಬರುತ್ತದೆ. ಸುಮಾರು 18 ಟನ್ ತೂಕದ ಎಲ್‌ಪಿಜಿ ಗ್ಯಾಸ್ ಹೊಂದಿರುವ ಟ್ಯಾಂಕರ್ ಮುಂಬಾಗದ ಹೌಸಿ ಹಾಗೂ ಕೆಳಭಾಗದ ಚೆಸ್ಸಿ ಅದಾಗಲೇ ಗಂಗಾವಳಿ ನೀರಿನಲ್ಲಿ ಮುಳುಗಿ ಹೋಗಿದ್ದವು ಅಥವಾ ಕೊಚ್ಚಿ ಹೋಗಿದ್ದವು ಕೇವಲ ಗ್ಯಾಸ್ ತುಂಬಿದ ಟ್ಯಾಂಕ್ ಮಾತ್ರ ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಸಗಡಗೇರಿ ತಲುಪಿತ್ತು. 
    18 ಟನ್ ತೂಕದ ಗ್ಯಾಸ್ ಹೊಂದಿರುವ ಗ್ಯಾಸ್ ಟ್ಯಾಂಕರ್ ನೀರಿನಲ್ಲಿ ತೇಲುತ್ತಿರುವುದು ಸುತ್ತಮುತ್ತಲಿನ ಐದಾರು ಕಿಲೋಮೀಟರ್ ಜನರಿಗೆ ಆತಂಕ ಸೃಷ್ಟಿಸಿತ್ತು. ಯಾವುದೇ ಸಂದರ್ಭದಲ್ಲಿ ಟ್ಯಾಂಕರ್ ಬ್ಲಾಸ್ಟ್ ಆಗಬಹುದು ಅಥವಾ ಅನಿಲ ಸೋರಿಕೆ ಆಗಬಹುದು ಎಂಬ ಭಯ ಜಿಲ್ಲಾಡಳಿತ ಸೇರಿದಂತೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳದವರನ್ನು ಕಾಡ ತೊಡಗಿತು. ಹೀಗಾಗಿ, ಗ್ಯಾಸ್ ಟ್ಯಾಂಕರ್ ಪತ್ತೆಯಾದ ಐದಾರು ಕಿಲೋಮೀಟರ್ ದೂರದ ಹಲವು ಗ್ರಾಮಗಳ ಜನರನ್ನು ನಾಲ್ಕು ದಿನ ಊರಿನಿಂದ ಹೊರಗೆ ಇಡಲಾಯಿತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು, ಗ್ಯಾಸ್ ಬಳಕೆ ಬೆಂಕಿ ಹಚ್ಚುವ ಈ ಯಾವುದೇ ಕಾರ್ಯವನ್ನು ಮಾಡದಂತೆ ಸೂಚಿಸಲಾಯಿತು. (ಈಗಾಗಲೇ ಇದೇ ಮಾರ್ಗದ ಬರ್ಗಿಯಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ದುರಂತ ಇದುವರೆಗೂ ಜಿಲ್ಲೆಯ ಜನರ ಮನಸ್ಸಿನಿಂದ ಮಾಯವಾಗಿಲ್ಲ) ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಇನ್ನಿತರ ಇಲಾಖೆಗಳು ಮುಂಜಾಗ್ರತೆಯಾಗಿ ಎಲ್ಲ ಕ್ರಮಗಳನ್ನು ಕೈಗೊಂಡರು.
   ಭಾರತೀಯ ನೌಸೇನಾದಳ, ಅಗ್ನಿಶಾಮಕ ದಳ, ಎಚ್‌ಪಿ ಗ್ಯಾಸ್ ಕಂಪನಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಕ್ರೇನ್ ಆಪರೇಟರ್ಗಳ ಸಭೆ ನಡೆಸಿ ಗ್ಯಾಸ್ ಟ್ಯಾಂಕರ್ ಅನ್ನು ದಡಕ್ಕೆ ತರುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಗುರುವಾರ ಬೆಳಿಗ್ಗೆ 6 ಗಂಟೆಗೆ ನೇವಿ ತಂಡದವರು ಅತ್ಯಂತ ಗಟ್ಟಿಮುಟ್ಟಾದ ರೋಪ(ಹಗ್ಗ) ವನ್ನು ಗಂಗಾವಳಿ ನದಿಯಲ್ಲಿ ಅರ್ದ ಮುಳುಗಿ ಅರ್ದ ತೇಲುತ್ತಿದ್ದ ಗ್ಯಾಸ್ ಟ್ಯಾಂಕರ್ ಗೆ ಕಟ್ಟುವಲ್ಲಿ ಯಶಸ್ವಿಯಾದರು, ಸುಮಾರು 750 ಅಡಿ ಉದ್ದದ ರೋಪ್ ಅನ್ನು ಇನ್ನೊಂದು ಬದಿಗೆ ಮೂರಕ್ಕೂ ಹೆಚ್ಚು ಕ್ರೇನ್ಗಳಿಗೆ ಕಟ್ಟಲಾಯಿತು.
  ಯಲ್ಲಾಪುರದ ಕ್ರೇನ್ ಆಪರೇಟರ್ ಇಮ್ರಾನ್ ಸನದಿ, ಗ್ಯಾಸ್ ಟ್ಯಾಂಕರ್ ನೀರಿನಿಂದ ಎಳೆದು ತರುವ ಕುರಿತು ಇನ್ನಿತರ ತಂಡಗಳಾದ ಅಂಕೋಲಾದ ದೀಪಕ್ ಜಾಂಬಳೇಕರ ಹಾಗೂ‌ ಕುಮಟಾದ ವಾಸು ಉಪ್ಪಾರ್ ಕ್ರೇನ್ ತಂಡದ ಸಹಾಯ ಪಡೆದು, ಬೆಳಿಗ್ಗೆ 6:00 ಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ(7.30 ತಾಸು) ಕಾರ್ಯಾಚರಣೆ ನಡೆಸಿ ಗಂಗಾವಳಿ ನದಿಯಲ್ಲಿ ಬಿದ್ದು ತೇಲುತ್ತಿದ್ದ ಗ್ಯಾಸ್ ಟ್ಯಾಂಕರ್ ಅನ್ನು ದಡಕ್ಕೆ ಎಳೆದು ತೆರದಾಯಿತು.
     ಎಚ್ ಪಿ ಗ್ಯಾಸ್ ಕಂಪನಿಯ ತಂತ್ರಜ್ಞರು ಗ್ಯಾಸ್ ಟ್ಯಾಂಕರ್ ನಿಂದ ಹಂತ ಹಂತವಾಗಿ ಗ್ಯಾಸನ್ನು ಗಂಗಾವಳಿ ನದಿಯ ನೀರಿನಲ್ಲಿ ಬಿಟ್ಟು ಖಾಲಿ ಮಾಡಿದರು, ಶುಕ್ರವಾರ ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ಗ್ಯಾಸ್ ಟ್ಯಾಂಕರ್ ನ ಒಂದು ಬದಿಯಿಂದ ನೀರು ತುಂಬಿ ಇನ್ನೊಂದು ಬದಿಯಿಂದ  ಗ್ಯಾಸ್ ಹೊರಹಾಕಿ ಸಂಪೂರ್ಣವಾಗಿ ಗ್ಯಾಸ್ ಖಾಲಿ‌ ಮಾಡಲಾಯಿತು. 
   ಗುಡ್ಡ ಕುಸಿತದ ಅಪಾಯದ ಮಧ್ಯೆ ಸರಕಾರಿ ಅಧಿಕಾರಿಗಳು ಗ್ಯಾಸ್ ಕಂಪನಿ, ನೆವೆಲ್ ಬೇಸ್ ನವರು, ಪ್ರಮುಖವಾಗಿ ಕ್ರೇನ್ ಆಪರೇಟರ್ ಗಳು ಹಲವು ಅಡೆತಡೆಗಳನ್ನು ಎದುರಿಸಿ ಕೆಲಸ ಮಾಡಿದರು.
   ಹಲವಾರು ಕ್ರೇನ್‌ಗಳು, ಒಟ್ಟು 23 ಜನ ಸಹಾಯಕರು ಆಪರೇಷನ್ ಯಶಸ್ವಿಯಾಗಿಸಿ ಕೊನೆಯಲ್ಲಿ ಖುಷಿಯ ನಗೆ ಬೀರಿದರು.
   ಯಲ್ಲಾಪುರ ನ್ಯೂಸ್ ಜೊತೆ ಮಾತನಾಡಿರುವ ಇಮ್ರಾನ್ ಸನದಿ, ಈ ಕಾರ್ಯಾಚರಣೆಯಲ್ಲಿ ಅಲ್ಲಿಯ ಗ್ರಾಮಸ್ಥರು, ಜಿಲ್ಲಾ ಮತ್ತು ತಾಲೂಕ ಮಟ್ಟದ ವಿವಿಧ ಸ್ಥರದ ಅಧಿಕಾರಿಗಳು, ಎಚ್.ಪಿ ಗ್ಯಾಸ್ ಕಂಪನಿಯ ಅಧಿಕಾರಿಗಳು ಹಾಗೂ ತಂತ್ರಜ್ಞರು, ನೇವಲ್ ಅಧಿಕಾರಿಗಳು ಬಹಳಷ್ಟು ಸಹಕಾರ ನೀಡಿದ್ದಾರೆ. ಯಲ್ಲಾಪುರ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದ ತುಂಬಿದ್ದ ಹಾಗೂ ಖಾಲಿ ಗ್ಯಾಸ್ ಟ್ಯಾಂಕರ್ ಗಳನ್ನು ಎತ್ತಿ ಅನುಭವ ಇದ್ದಿರುವ ನಮಗೆ, ಗಂಗಾವಳಿಯಿಂದ ಗ್ಯಾಸ್ ಟ್ಯಾಂಕನ್ನು ಎತ್ತಿ ದಡಕ್ಕೆ ತರುವುದು ಹೊಸ ಅನುಭವವನ್ನು ನೀಡಿತು. ಹಲವು ವಿಷಯಗಳು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
   ಯಲ್ಲಾಪುರದ ಕ್ರೇನ್ ಆಪರೇಟರ್ ಇಮ್ರಾನ್ ಸನದಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಯಲ್ಲಾಪುರದಲ್ಲಿ ಇಷ್ಟೊಂದು ಸಮರ್ಥ ಕ್ರೇನ್ ಆಪರೇಟರ್ ಇದ್ದು, ಜಿಲ್ಲೆಯ ಯಾವುದೇ‌ ಮೂಲೆಯಲ್ಲಿ ಅವಘಡ ಸಂಭವಿಸಿದಾಗ ಅದನ್ನು ಬಗೆಹರಿಸುವ ಅವರ ಕಾರ್ಯ ಶ್ಲಾಘನೀಯ. ..... ರಾಜೇಶ ನಾಯ್ಕ, ಎಲೇಕ್ಟ್ರಿಕಲ್ ಕಂಟ್ರಾಕ್ಟರ್.

ಕ್ರೇನ್ ಆಪರೇಟರ್ ಇಮ್ರಾನ್ ಸನದಿ ಸಾಹಸಿ ಪ್ರವತ್ತಿಯವರು, ಶಿರೂರ ಗುಡ್ಡ ಕುಸಿತ ಹಾಗೂ ಸಗಡಗೇರಿಯಲ್ಲಿ ತೇಲಿ‌ಬಂದ ಗ್ಯಾಸ್ ಟ್ಯಾಂಕರ್ ಯಶಸ್ವಿಯಾಗಿ ಮೇಲಕ್ಕೆತ್ತಿದ ಅವರ ತಂಡದ ಕಾರ್ಯ ಯಲ್ಲಾಪುರಕ್ಕೆ ಹೆಮ್ಮೆಯಾಗಿದೆ ........ ನವೀನ ನಾಯ್ಕ ಕಾಳಮ್ಮನಗರ.