ಯಲ್ಲಾಪುರ : ಕಳೆದ ಎರಡು ದಿನಗಳಿಂದ(ಸೋಮವಾರ ಮಂಗಳವಾರ) ಯಲ್ಲಾಪುರ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ವಾರ ಬಿಟ್ಟುಬಿಡದೆ ಸುರಿದ ಮಳೆ ತೀವ್ರ ಅವಘಡಗಳನ್ನು ಸೃಷ್ಟಿಸಿತ್ತು. ಈ ಮಳೆಯ ಪರಿಣಾಮದಿಂದ ಕೆಳಮಟ್ಟದ ಅನೇಕ ಸೇತುವೆಗಳ ಮೇಲೆ ಹಳ್ಳದ ನೀರು ಹರಿದು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತ್ತು.
ಮುಖ್ಯವಾಗಿ ಇಡಗುಂದಿ ಪಂಚಾಯಿತಿ ವ್ಯಾಪ್ತಿಯ ಪಣಸಗುಳಿ ಸೇತುವೆಯ ನೀರು ಹರಿದು ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳದಂತ ಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಮಯದಲ್ಲಿ, ಬೀಗಾರ್ ಮತ್ತು ಬಾಗಿನಕಟ್ಟ ರಸ್ತೆಯ ಮಣ್ಣು ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರ ಪರಿಣಾಮವಾಗಿ ಸ್ಥಳೀಯರು ಬಹಳ ಸಂಕಷ್ಟವನ್ನು ಅನುಭವಿಸಬೇಕಾಯಿತು.
ಮಳೆಯಿಂದಾಗಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದ ಪರಿಣಾಮ ಹಲವಾರು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡು ಸಾರ್ವಜನಿಕರಿಗೆ, ಮೊಬೈಲ್ ಸ್ಥಿರ ದೂರವಾಣಿ ಸಂಪರ್ಕಕ್ಕೆ ತೊಂದರೆಯಾಗಿತ್ತು.
ರಾಷ್ಟ್ರೀಯ ಹೆದ್ದಾರಿಯ 63ರ ಮೇಲೆ ಅರಭೈಲ್ ಘಟ್ಟದಲ್ಲಿ ಮಳೆಯಿಂದಾಗಿ ಆಗಾಗ ಮರಗಳು ಬಿದ್ದಿರುವುದರಿಂದ ಹೆದ್ದಾರಿ ಸಂಚಾರಕ್ಕೂ ಕೂಡ ವ್ಯತ್ಯಾಸವಾಗಿತ್ತು. ಇದರ ಪರಿಣಾಮವಾಗಿ ಬಹಳಷ್ಟು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ವಿವಿಧ ಇಲಾಖೆಯ ಅಧಿಕಾರಿಗಳು ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸುತ್ತಿದ್ದು, ಸಾರ್ವಜನಿಕರಿಗೆ ತ್ವರಿತವಾಗಿ ಸಹಾಯಹಸ್ತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಸ್ಥಗಿತವಾಗಿರುವ ಮಳೆ ಸಾರ್ವಜನಿಕರಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದ್ದು, ಎಂದಿನಂತೆ ಜನ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಶಾಲೆಗೆ ಕಾಲೇಜಿಗೆ ತೆರಳಿ ಸುರಕ್ಷಿತವಾಗಿ ಮನೆಗೆ ಮರಳುತ್ತಿದ್ದಾರೆ.