ಯಲ್ಲಾಪುರ: ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಆಯುಷ್ಮಾನ್ ಅರೋಗ್ಯ ಮಂದಿರ, ಪಟ್ಟಣ ಪಂಚಾಯತಿ, ಮತ್ತು ರವೀಂದ್ರನಗರ ಸ್ಥಳೀಯ ಸಂಘಗಳ ಸಹಯೋಗದಲ್ಲಿ ಡೆಂಗ್ಯೂ ರೋಗಕ್ಕೆ ಕಾರಣವಾಗಿರುವ ಸೊಳ್ಳೆ ಲಾರ್ವಾ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ, ರವೀಂದ್ರ ನಗರವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಮಾತನಾಡಿ, ಡೆಂಗ್ಯೂ ರೋಗ ಹರಡದಂತೆ ತಡೆಯಲು ಸ್ವಚ್ಛತೆ ಕಾಪಾಡುವುದು ಮುಖ್ಯ. ತ್ಯಾಜ್ಯ ವಿಲೇವಾರಿ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಜನರಲ್ಲಿ ಜಾಗೃತಿ ಬೆಳೆಯುವುದು ಅಗತ್ಯ. ಕೀಟನಾಶಕ ಸಿಂಪಡಿಕೆ, ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸಮುದಾಯ ಆರೋಗ್ಯ ಅಧಿಕಾರಿ ಪರಶುರಾಮ ಡೊಣೂರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ರೇವತಿ ಬಿ. ನಾಯ್ಕ ಪ್ರಾತ್ಯಕ್ಷಿಕೆಯ ಮೂಲಕ ಲಾರ್ವ ನಾಶಮಾಡುವ ಕ್ರಮಗಳನ್ನು ಮನೆಗೆ ಮನೆಗೆ ತೋರಿಸಿಕೊಟ್ಟರು,
ಸೊಳ್ಳೆ ಲಾರ್ವಾ ನಿರ್ಮೂಲನೆ ಬಗ್ಗೆ ಮಾಹಿತಿ ನೀಡಲು ವಿಶೇಷ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಜನರಲ್ಲಿ ಡೆಂಗ್ಯೂ ಜಾಗೃತಿ ಮೂಡಿಸಲು ವಿವಿಧ ಉಪಾಯಗಳನ್ನು ವಿವರಿಸಲಾಯಿತು. ಈ ಕಾರ್ಯಕ್ರಮವು ಡೆಂಗ್ಯೂ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು.