ಯಲ್ಲಾಪುರ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಚೆ, ಬೀಗಾರ, ಹೊನ್ನಗದ್ದೆ ಸೇರಿದಂತೆ ಇತರ ಭೂಕುಸಿತ ಪ್ರದೇಶಗಳಲ್ಲಿ ಇರುವ ನಿವಾಸಿಗಳಿಗೆ ತುರ್ತಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯ ಸೂಚನಾ ಪತ್ರವನ್ನು ಬುಧವಾರ ಜಾರಿಗೊಳಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ, ಈ ಪ್ರದೇಶದ ನಿವಾಸಿಗಳು ಸುರಕ್ಷಿತ ದೃಷ್ಟಿಯಿಂದ ವಜ್ರಳ್ಳಿ ಗ್ರಾಮ ಪಂಚಾಯತ್ ವತಿಯಿಂದ ತೆರೆಯಲಾಗುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ತಿಳಿಸಲಾಗಿದೆ.
ಕಳಚೆ ಭಾಗದ ಭೂಕುಸಿತ ಸ್ಥಳದಲ್ಲಿರುವ ಮನೆಗಳಿಗೆ ಬುಧವಾರ ಭೇಟಿ ನೀಡಿ, ಮುನ್ನೆಚ್ಚರಿಕೆ ಪತ್ರಗಳನ್ನು ನೀಡಲಾಗಿದೆ ಎಂದು ವಜ್ರಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷಿ ಬಂಟ್ ತಿಳಿಸಿದ್ದಾರೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ದೀಪಿಕಾ ಹೊಸಮನಿ, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ, ಭೂಕುಸಿತದ ಕುರಿತು ಮಾಹಿತಿ ನೀಡಿದ್ದಾರೆ.
ಮರ ಬಿದ್ದು 6 ವಿದ್ಯುತ್ ಕಂಬಗಳು ಧರೆಗೆ
ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಹೊನ್ನಗದ್ದೆ ಗ್ರಾಮದ ವೀರಭದ್ರ ದೇವಸ್ಥಾನದ ಬಳಿ ಮಂಗಳವಾರ ರಾತ್ರಿ ಮರ ಬಿದ್ದು ಆರು ವಿದ್ಯುತ್ ಕಂಬಗಳು ಧರೆಗುರುಳಿವೆ. ಈ ಘಟನೆಯಿಂದ ಕಂಚಿಮನೆ ಭಾಗದ ಜನರಿಗೆ ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಂತರ ಮರವನ್ನು ಒಂದು ಭಾಗದಲ್ಲಿ ತೆರವುಗೊಳಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.