ಯಲ್ಲಾಪುರ: ಮಂಚಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಂಬೇಸಾಲ ಗ್ರಾಮದಲ್ಲಿ "ಡೆಂಗ್ಯೂ ವಿರೋಧಿ ಮಾಸಾಚರಣೆ" ಅಂಗವಾಗಿ ಸೋಮವಾರ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಅರೋಗ್ಯ ಶಿಕ್ಷಣ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮಂತ್ರಿಗಳಿಂದ ಕೃಷಿ ಸಖಿ ಪ್ರಶಸ್ತಿ ಪಡೆದ ರಾಜೀವ್ ಹೆಗಡೆ, ಡೆಂಗ್ಯೂ ರೋಗದ ಭಯಾನಕ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ, ರೋಗದ ತಡೆಗಟ್ಟುವಿಕೆಯಲ್ಲಿ ಸಮುದಾಯದ ಪಾತ್ರವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿಗಳಾದ ಎಸ್. ಟಿ. ಭಟ್, "ಡೆಂಗ್ಯೂ ರೋಗದ ಹಂತಗಳು, ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸೊಳ್ಳೆ ನಿಯಂತ್ರಣದಲ್ಲಿ ಸಮುದಾಯದ ಪಾತ್ರ"ದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ ಮಾತನಾಡಿ, "ಡೆಂಗ್ಯೂ ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು. ಲಾರ್ವ ಉತ್ಪತ್ತಿ ತಾಣಗಳನ್ನು ನಾಶಮಾಡುವ ಮೂಲಕ ರೋಗದ ಹರಡುವಿಕೆಯನ್ನು ತಡೆಯಬಹುದು" ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದೇವೇಂದ್ರ ಹೆಗಡೆ ಕಬ್ಬಿನಗದ್ದೆ, "ಗ್ರಾಮಸ್ಥರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಗ್ರಾಮವನ್ನು ಡೆಂಗ್ಯೂ ಮುಕ್ತ ಗ್ರಾಮವನ್ನಾಗಿ ಮಾಡಬಹುದು, ಜನರು ರೋಗ ಹೋಗಲಾಡಿಸಲು ಇಲಾಖೆಯೊಂದಿಗೆ ಸಹಕರಿಸಬೇಕು" ಎಂದರು.