ಯಲ್ಲಾಪುರ : ತಾಲೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆಯ ಗಿಡಗಾರಿ ರಸ್ತೆಯ ಮೇಲಿನ ಗುಡ್ಡ ಕುಸಿಯುವ ಭೀತಿ ಆವರಿಸಿದ್ದು, ರಸ್ತೆಯ ಕೆಳಗಿನ ಐದು ಮನೆಗಳ ಕುಟುಂಬದವರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಹೊನ್ನಗದ್ದೆಯ ಗಿಡಗಾರಿ ಭಾಗದ ಸುಭಾಷ್ ಭಟ್ ಗಿಡಗಾರಿ, ಮಂಜುನಾಥ ವಿ ಭಟ್ಟ, ಗೋಪಾಲ ಕೃಷ್ಣ ಭಟ್ಟ, ಶಿವರಾಮ ಭಟ್ಟ, ಕೃಷ್ಣ ಭಟ್ಟ ಇವರ ಮನೆಗಳು ಗುಡ್ಡ ಕುಸಿಯುವ ಭೀತಿಯನ್ನು ಎದುರಿಸುತ್ತಿವೆ. ಇದೇ ರೀತಿ ನಿರಂತರವಾಗಿ ಮಳೆ ಸುರಿದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಯಲ್ಲಾಪುರ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಜನತೆ ಅನೇಕ ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ. ಪ್ರಮುಖವಾಗಿ ಹಳ್ಳಕೊಳ್ಳಗಳು ತುಂಬಿರುವುದರಿಂದ ಶಾಲಾ ಮಕ್ಕಳು ಮನೆಯಿಂದ ಶಾಲೆಗೆ ಹೋಗಿ ಬರದಂತಾಗಿದ್ದು, ಶಾಲೆಗೆ ರಜೆ ಘೋಷಣೆ ಆಗಿರುವುದರಿಂದ ಸಧ್ಯ ನಿರಾತಂಕಿತರಾಗಿದ್ದಾರೆ. ಬಹುತೇಕ ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಅಂತರದಲ್ಲಿ ಗುಡ್ಡ ಕಣಿವೆಗಳ ಮಧ್ಯೆ ಒಂದೊಂದು ಮನೆಯಿದ್ದು ಅದರಲ್ಲಿಯೂ ವಜ್ರಳ್ಳಿ ಕಳಚೆಯಂತಹ ಪ್ರದೇಶಗಳು ಈಗಾಗಲೇ ಭೂಕುಸಿತವಾಗಿದೆ, ಮತ್ತು ಭೂಕುಸಿತದ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹೊನ್ನಗದ್ದೆ ರಸ್ತೆ ಕೂಡ ಗುಡ್ಡ ತಗ್ಗಿನಿಂದ ಕೂಡಿದ್ದು ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ಮಣ್ಣುಹಸಿಯಾಗಿ ದೊಡ್ಡ ಪ್ರಮಾಣದಲ್ಲಿ ಕುಸಿಯುವ ಆತಂಕ ಎದುರಾಗಿದೆ.