Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday, 10 July 2024

ಅಂಗನವಾಡಿ ಕಾರ್ಯಕರ್ತರು ಸಹಾಯಕರನ್ನು ಸರ್ಕಾರಿ ನೌಕರರಂತೆ ಖಾಯಂ ಮಾಡಬೇಕು, ಮಕ್ಕಳು‌ಮಹಿಳೆಯರ ಬಗ್ಗೆ ಸರ್ಕಾರ ಕಾಳಜಿ ವಹಿಸಿ : ಅಂಗನವಾಡಿ ನೌಕರರ ಸಂಘದ ಮನವಿ

ಯಲ್ಲಾಪುರ ;  ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಯಲ್ಲಾಪುರ ತಾಲೂಕಾ ಸಮಿತಿಯ ಸದಸ್ಯರು ತಮ್ಮ ವಿವಿಧ ಬೇಡಿಕೆ‌ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬುಧವಾರ ಮನವಿ ರವಾನಿಸಿದರು. 
  2024-25ರ ಬಜೆಟ್‌ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಮೀಸಲಿಡಬೇಕು,  ಅಂಗನವಾಡಿಗಳನ್ನು ಬಲಪಡಿಸಲು ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.
  ಮನವಿಯಲ್ಲಿ ಜುಲೈ ತಿಂಗಳು ಕೇಂದ್ರ ಸರ್ಕಾರವು ಮಂಡಿಸಲಿರುವ 2024-25 ರ ಬಜೆಟ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರಲ್ಲಿನ ಅಪೌಷ್ಟಿಕತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮತ್ತು ಅಂಗನವಾಡಿ ಕಾರ್ಮಿಕರಿಗೆ ಸ್ಥಿರ ಉದ್ಯೋಗ ಖಾತ್ರಿಪಡಿಸುವಂತೆ ಒತ್ತಾಯಿಸಲಾಯಿತು.
    ಪೌಷ್ಟಿಕತೆಯ ಕೊರತೆ ದೇಶದ ಪ್ರಮುಖ ಸಮಸ್ಯೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ  -6 ನ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆಯು ಮಹಿಳೆಯರಲ್ಲಿ ಶೆ.57.03ಕ್ಕಿಂತ ಹೆಚ್ಚು, ಹದಿಹರೆಯದವರಲ್ಲಿ ಶೇ. 59.1, ಗರ್ಭಿಣಿಯರಲ್ಲಿ ಶೆ.52.2 ಮತ್ತು ಆರು ವರ್ಷದೊಳಗಿನ ಮಕ್ಕಳಲ್ಲಿ ಶೇ. 67.1 ರಷ್ಟಿದೆ. ಪ್ರತಿ ವರ್ಷ ಸರಾಸರಿ ಆರು ವರ್ಷದೊಳಗಿನ ಸುಮಾರು 9 ಲಕ್ಷ ಮಕ್ಕಳು ಮೃತಪಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
   ಈ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ  ಜಾರಿಗೊಳಿಸಲಾಗಿದೆ. ಈ ಯೋಜನೆಯು ದೇಶದ ಸುಮಾರು 8 ಕೋಟಿ ಮಕ್ಕಳ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಒದಗಿಸುತ್ತಿದೆ. ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಬೇಕು‌ ಎಂದು ಆಗ್ರಹಿಸಲಾಗಿದೆ.
   ಮುಂಬರುವ ಬಜೆಟಿನಲ್ಲಿ ಐಸಿಡಿಎಸ್‌ಗೆ ಹೆಚ್ಚಿನ ಹಣ ಹಂಚಿಕೆಯಾಗಬೇಕು. ಸಂಪೂರ್ಣ ಮೂಲಭೂತ ಸೌಕರ್ಯ ಮತ್ತು ಉತ್ತಮ ಗುಣಮಟ್ಟದ ಆಹಾರದೊಂದಿಗೆ ಐಸಿಡಿಎಸ್ ಯೋಜನೆಯನ್ನು ಬಲಪಡಿಸಬೇಕು. ಅಂಗನವಾಡಿಗಳಲ್ಲಿ ಇಸಿಸಿಇ ಘಟಕಗಳನ್ನು ಬಲಪಡಿಸುವುದು, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಗ್ರೇಡ್ 3 ಮತ್ತು ಗ್ರೇಡ್ 4 ಸರ್ಕಾರಿ ನೌಕರರಂತೆ ಖಾಯಂ ಮಾಡಬೇಕು. ಗ್ರಾಚ್ಯುಟಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕು. ಅಂಗನವಾಡಿ ನೌಕರರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗುರುತಿಸಬೇಕು. ಯಾವುದೇ ರೂಪದಲ್ಲಿ ಐಸಿಡಿಎಸ್ ಅನ್ನು ಖಾಸಗೀಕರಣಗೊಳಿಸಬಾರದು. ಈ‌ ಮುಂತಾದ ಬೇಡಿಕೆಗಳ ಬಗ್ಗೆ ಮನವಿಯಲ್ಲಿ ಬೇಡಿಕೆ ಇಡಲಾಗಿದೆ.
   ತಹಶೀಲ್ದಾರ ಅಶೋಕ‌ ಭಟ್ ಮನವಿ ಸ್ವೀಕರಿಸಿದರು. ಅಂಗನವಾಡಿ ನೌಕರರ ಸಂಘ ತಾಲೂಕಾ ಸಮಿತಿಯ ಅಧ್ಯಕ್ಷೆ ಲಲಿತಾ ಹೆಗಡೆ, ಕಾರ್ಯದರ್ಶಿ ಲಕ್ಷ್ಮೀ ಸಿದ್ದಿ, ಖಜಾಂಚಿ ಗೌರಿ‌ ಮರಾಟೆ, ತ್ರೀಶಾ ಅರಬೈಲ್, ಲಕ್ಷ್ಮೀ ಮರಾಟೆ, ರೇಣುಕಾ ಶಿಂದೆ, ವಿಶಾಲ ಮುಂತಾದವರಿದ್ದರು.