ಯಲ್ಲಾಪುರ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತ ಜನರಿಗೆ ಸಾಂತ್ವನ ಹೇಳಿ ಹುಬ್ಬಳ್ಳಿಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರವಿವಾರ ಸಂಜೆ ಯಲ್ಲಾಪುರದ ಲೋಕೋಪಯೋಗಿ ಪರಿವೀಕ್ಷಣ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.
ಯಲ್ಲಾಪುರ ಬಿಜೆಪಿ ಮಂಡಲ ವತಿಯಿಂದ ವಿಜಯೇಂದ್ರ ಅವರನ್ನು ಸ್ವಾಗತಿಸಲಾಯಿತು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ರಾಜ್ಯದ ಕಾಂಗ್ರೆಸ್ ಸರ್ಕಾರ ಮೂಡಾ ಹಗರಣ, ವಾಲ್ಮೀಕಿ ನಿಗಮದಲ್ಲಿಯ ಹಗರಣ, ಹೀಗೆ ದಿನ ನಿತ್ಯ ಒಂದಲ್ಲ ಒಂದು ಹಗರಣದ ಸರಮಾಲೆಯನ್ನು ಈ ಸರ್ಕಾರ ಸುತ್ತಿಕೊಳ್ಳುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದ ಇತಿಹಾಸದಲ್ಲಿ ಜನರು ಕಂಡಿರಲಿಲ್ಲ. ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರದ ವಿರುದ್ಧ ನಾವು ಸಮರ್ಥವಾಗಿ ಹೋರಾಟ ಮಾಡುತ್ತೇವೆ," ಎಂದರು.
"ಯಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಬಗ್ಗೆ ನಮಗೆ ಹೆಮ್ಮೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಗೇರಿಯವರಿಗೆ ಯಶಸ್ವಿಯಾಗಿ ಅಂತರದ ಗೆಲುವನ್ನು ತಂದುಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಆದ ಅವಮಾನಗಳ ಬಗ್ಗೆ ನಮ್ಮ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.