ಯಲ್ಲಾಪುರ: ಪಟ್ಟಣದ ಮೌನ ಗ್ರಂಥಾಲಯದಲ್ಲಿ ಜುಲೈ 6ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ "ತಿಂಗಳ ನನ್ನ ಕವನ ಹಾಗೂ ಉಪನ್ಯಾಸ" ಕಾರ್ಯಕ್ರಮದಲ್ಲಿ ಪ್ರಖ್ಯಾತ ಅದ್ಯಾಪಕ ಮತ್ತು ಪುರಾಣ ತಜ್ಞ ಡಾ. ಗಣಪತಿ ಭಟ್ "ಪೌರಾಣಿಕ ಸಾಹಿತ್ಯದಲ್ಲಿ ಯಕ್ಷಗಾನ ಪರಂಪರೆ" ಕುರಿತು ಉಪನ್ಯಾಸ ನೀಡಿದರು.
ಡಾ. ಭಟ್ ಅವರು ಪುರಾಣಗಳ ಮತ್ತು ಪೌರಾಣಿಕ ಕಥೆಗಳ ಮಹತ್ವವನ್ನು ವಿವರಿಸುತ್ತಾ, "ಒಬ್ಬ ವ್ಯಕ್ತಿ ಪರಿಪೂರ್ಣ ಹಾಗೂ ಸೃಜನಶೀಲನಾಗಬೇಕಾದರೆ, ಪುರಾಣವನ್ನು ಓದಲೇಬೇಕು" ಎಂದು ಹೇಳಿದರು. ಪುರಾಣದ ಕಥೆಗಳನ್ನು ಮನರಂಜನೀಯವಾಗಿ ಮತ್ತು ಶಿಕ್ಷಣಾತ್ಮಕವಾಗಿ ಪ್ರಚಲಿತ ಮಾಡುವ ಯಕ್ಷಗಾನದ ಸಾಂಸ್ಕೃತಿಕ ಮಹತ್ವವನ್ನು ಅವರು ಪ್ರಸ್ತಾಪಿಸಿದರು. "ಯಕ್ಷಗಾನದಲ್ಲಿ ನಮ್ಮ ಕನ್ನಡ ಭಾಷೆಯ ಪರಿಶುದ್ಧತೆ ಮತ್ತು ಗಟ್ಟಿತನವನ್ನು ಕಾಣಬಹುದು. ಬೇರೆ ಯಾವ ಪ್ರಕಾರಗಳಲ್ಲಿ ಕನ್ನಡದ ಸತ್ವ ಕಾಣಲು ಸಾಧ್ಯವಿಲ್ಲ," ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಚಿಂತಕ ಪ್ರಮೋದ ಹೆಗಡೆ ಅವರು, "ಸಮಾಜದಲ್ಲಿ ಇಂದು ಬೌದ್ಧಿಕ ದಿವಾಳಿತನ ಉಂಟಾಗುತ್ತಿದೆ. ಅದಕ್ಕೆ ಜ್ಞಾನವಂದೇ ಪರಿಹಾರ ನೀಡಬಲ್ಲದು. ಜ್ಞಾನ ಸಂಪಾದನೆ ಮಾಡಬೇಕಾದರೆ ಗ್ರಂಥಾಲಯದಿಂದ ಮಾತ್ರ ಸಾಧ್ಯ. ಒಳ್ಳೆಯ ಗ್ರಂಥಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು," ಎಂದು ಹೇಳಿದರು.
ಖ್ಯಾತ ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ ಸುಂದರವಾದ ಯಕ್ಷಗಾನ ಪದ್ಯವನ್ನು ಹಾಡಿದರು. "ಯಕ್ಷಗಾನ ನಮ್ಮ ಸಂಸ್ಕಾರವನ್ನು ಮತ್ತು ಪುರಾಣಗಳ ಜ್ಞಾನವನ್ನು ನೀಡುತ್ತದೆ," ಎಂದು ಅವರು ಅಭಿಪ್ರಾಯಪಟ್ಟರು.
"ಮುಂಗಾರು" ಕವನ ವಾಚನದಲ್ಲಿ ಕವಿಗಳಾದ ಗಣಪತಿ ಕಂಚಿಪಾಲ್, ಸೀತಾ ಹೆಗಡೆ ಗಂಜಿಸರ, ಜಿ ಕೆ ಭಟ್ ಮಲವಳ್ಳಿ, ಶರಾವತಿ ಹೆಗಡೆ, ಗಂಗಾಧರ ಎಸ್ಎಲ್, ಅನಂತ ಹೆಗಡೆ ದಂತಳಿಗೆ, ಸೀತಾ ಭಟ್ ಮಲವಳ್ಳಿ, ಕಾವ್ಯ ಹೆಗಡೆ ಕೊಡಸೆ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಸೀತಾ ಹೆಗಡೆ ಪ್ರಾರ್ಥಿಸಿದರು. ಜಿ ಎಸ್ ಗಾಂವ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ. ಎಸ್ ಚಂದ್ರಶೇಖರ್ ನಿರೂಪಿಸಿದರು, ಮತ್ತು ಶ್ರೀರಾಮ ಲಾಲಗುಳಿ ವಂದಿಸಿದರು.