ಯಲ್ಲಾಪುರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ, ದಂಟಕಲ್ ಯಕ್ಷಚಂದನ ಸಂಸ್ಥೆಯ ಅಡಿಯಲ್ಲಿ, ಜುಲೈ 13ರಂದು ಸಂಜೆ 6 ಗಂಟೆಯಿಂದ ಚಂದಗುಳಿ ಸಿದ್ಧಿವಿನಾಯಕ ಗಂಟೆ ಗಣಪತಿ ದೇವಸ್ಥಾನದಲ್ಲಿ ಯಕ್ಷಸಂಜೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಯಕ್ಷಗಾನದ ಶ್ರೇಷ್ಠತೆ ಮತ್ತು ಜಾಗತಿಕ ಮನ್ನಣೆಯ ಬಗ್ಗೆ ಒತ್ತು ನೀಡಿದರು.
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಚಂದಗುಳಿಯ ಮೊಕ್ತೇಸರರಾದ ಲಕ್ಷ್ಮೀನಾರಾಯಣ ತಾರೀಮಕ್ಕಿ ಯಕ್ಷಗಾನ ಸಂಘಟನೆಯ ಪ್ರಾಮುಖ್ಯತೆ ಮತ್ತು ಧಾರ್ಮಿಕ ಮಹತ್ವವನ್ನು ವಿವರಿಸಿದರು.
ನಿವೃತ್ತ ದೈಹಿಕ ಶಿಕ್ಷಕ ಎನ್ ವಿ ಹೆಗಡೆ ಹಿತ್ಲಳ್ಳಿ ಮತ್ತು ಹಿರಿಯ ವರ್ತಕ ಡಿ ಶಂಕರ ಭಟ್ ಯಲ್ಲಾಪುರ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಯಕ್ಷಚಂದನ ಸಂಸ್ಥೆಯ ಅಧ್ಯಕ್ಷರಾದ ಸುಜಾತಾ ಎಸ್ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕಗೈದರು. ವೇದಮೂರ್ತಿ ವೆಂಕಟ್ರಮಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಯಕ್ಷಗಾನ ಪ್ರದರ್ಶನ:
"ಸುದರ್ಶನ ವಿಜಯ" ಯಕ್ಷಗಾನ ಆಖ್ಯಾನ ಪ್ರದರ್ಶನದಲ್ಲಿ. ಭಾಗವತರಾಗಿ ಸತೀಶ ಹೆಗಡೆ ದಂಟಕಲ್ ಮತ್ತು ನಂದನ ಹೆಗಡೆ ದಂಟಕಲ್ ಅವರು ತಮ್ಮ ಸುಶ್ರಾವ್ಯ ಗಾಯನದಿಂದ ಜನರನ್ನು ರಂಜಿಸಿದರು. ಶಂಕರ ಭಾಗವತ ಶಿರಸಿ ಮದ್ದಲೆ ನುಡಿಸಿದರು. ಚೆಂಡೆ ವಾದನದಲ್ಲಿ ಪ್ರಸನ್ನ ಭಟ್ ಹೆಗ್ಗಾರು ಮತ್ತು ರಘುಪತಿ ಹೆಗಡೆ ಹೂಡೇಹದ್ಡ ಅವರು ಭಾಗವಹಿಸಿದರು.
ಪಾತ್ರಧಾರಿಗಳು:
ಶತ್ರುಸೂದನನಾಗಿ ವಿನಯ ಬೆರೋಳ್ಳಿ, ಲಕ್ಷ್ಮೀ ಪಾತ್ರದಲ್ಲಿ ನಾಗರಾಜ ಕುಂಕಿಪಾಲ, ದೇವೆಂದ್ರನ ಪಾತ್ರದಲ್ಲಿ ವೆಂಕಟೇಶ್ ಬಗರಿಮಕ್ಕಿ, ವಿಷ್ಣುವಿನ ಪಾತ್ರದಲ್ಲಿ ಸನ್ಮಯ ಭಟ್ ಮತ್ತು ಸುದರ್ಶನನ ಪಾತ್ರದಲ್ಲಿ ನಿತಿನ್ ಹೆಗಡೆ ಅವರು ಸಾಂಪ್ರದಾಯಿಕ ಕುಣಿತ ಮತ್ತು ಭಾವನಾತ್ಮಕ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿದರು. ಸುಮಾರು 500 ಕ್ಕೂ ಹೆಚ್ಚು ಜನ ಪ್ರೇಕ್ಷಕರು ಭಾಗವಹಿಸಿದ್ದರು.