ಯಲ್ಲಾಪುರ : ಅನುದಾನದ ಕೊರತೆಯ ನಡುವೆಯೂ ಗ್ರಾಮಪಂಚಾಯಿತಿ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಡೆಂಗ್ಯೂ ಪ್ರಯುಕ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಚತೆ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹೇಳಿದರು.
ಅವರು , ಜು.12 ರಂದು ತಾಲೂಕಿನ ಉಮ್ಮಚಗಿಯ ಶ್ರೀ ವಿದ್ಯಾಗಣಪತಿ ದೇವಸ್ಥಾನ ಸಮೀಪದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡುತ್ತಿದ್ದರು.
ಅಡಿಕೆ ಮಿಳೆ ಉದುರುವಿಕೆ, ಪೊಟ್ಯಾಷ್ ಕೊರತೆ, ಬೆಳೆ ವಿಮೆ, ಪರ್ಯಾಯ ಬೆಳೆಗಳ ಕುರಿತು ಚರ್ಚೆ ನಡೆಯಿತು. ಸ್ಥಳೀಯ ಪ್ರೌಢಶಾಲೆಗೆ ಜವಾನ ಹುದ್ದೆ ಭರ್ತಿ, ಶಿಕ್ಷಕರ ಕೊರತೆ ಪೂರೈಸುವುದು ಚರ್ಚೆಯಾಯಿತು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರ ನೇಮಕಾತಿಗೆ ಒತ್ತಾಯಿಸಲಾಯಿತು. ಹುಣಸೇಮನೆಯಲ್ಲಿ ಪ್ರತ್ಯೇಕ ಪರಿವರ್ತಕ, ಶೀಗೇಮನೆಯಲ್ಲಿ ವಿದ್ಯುತ್ ಮಾರ್ಗ ದುರಸ್ತಿ, ಉಮ್ಮಚಗಿಯಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಪರಿಹಾರ, ರಸ್ತೆಗಳ ದುರಸ್ತಿ, ರಸ್ತೆ ಬದಿಯ ಚರಂಡಿಯ ದುರಸ್ತಿ, ಉಮ್ಮಚಗಿಯಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣದ ವಿಳಂಬ, ರಸ್ತೆಗಳಲ್ಲಿ ಸುರಕ್ಷತೆ ಕ್ರಮಗಳ ಕುರಿತು ಚರ್ಚೆ. ಈ ಪ್ರದೇಶದ ಶಾಲೆ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪೊಲೀಸರಿಗೆ ಒತ್ತಾಯಿಸಲಾಯಿತು. ಸರ್ಕಾರದಿಂದ ಅಂಗವಿಕಲರಿಗೆ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಲಾಯಿತು.
ಉಸ್ತುವಾರಿ ಅಧಿಕಾರಿ ಜಿ.ಪಂ. ಸ.ಕಾ.ನಿ. ಅಭಿಯಂತರ ಅಶೊಕ ಬಂಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಸುಭಾಷ ಹೆಗಡೆ, ಕೃಷಿ ಇಲಾಖೆಯ ಅಧಿಕಾರಿ ನಾಗರಾಜ ನಾಯ್ಕ, ಶಿಕ್ಷಣ ಇಲಾಖೆಯ ಸಿ.ಆರ್.ಪಿ ವಿಷ್ಣು ಭಟ್ಟ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಶರಣು ತುಂಬಗಿ, ಹಿರಿಯ ಆರೋಗ್ಯ ನಿರೀಕ್ಷಕ ವಿರೂಪಾಕ್ಷಪ್ಪ ಶಿರೂರು, ಹೆಸ್ಕಾಂ ಶಾಖಾಧಿಕಾರಿ ನಾಗರಾಜ, ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ, ರವಿ, ಪಿ.ಎಸ್.ಐ ಶ್ಯಾಮ ಪಾವಸ್ಕರ, ಎಎಸ್‌ಐ ದೀಪಕ್ ನಾಯ್ಕ, ಜಿ.ಪಂ.ಅಭಿಯಂತರ ಮೀನಾಕ್ಷಿ,
ಇನ್ನಿತರರು ಭಾಗವಹಿಸಿ, ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರ.
ಉಪಾಧ್ಯಕ್ಷೆ ಗಂಗಾ ಹೆಗಡೆ ಮತ್ತಿತರ ಸದಸ್ಯರು, ಪಿ.ಡಿ.ಓ. ನಸ್ರೀನಾ ಯಕ್ಕುಂಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋಹನ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. Ad