ಯಲ್ಲಾಪುರ: ಯಲ್ಲಾಪುರದಿಂದ ಬಿಸಗೋಡ್ ತೆರಳುವ ದೇಹಳ್ಳಿ ಕ್ರಾಸ್ ನಿಂದ ಒಂದುವರೆ ಕಿಲೋಮೀಟರ್ ರಸ್ತೆ ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದ್ದು, ಚಾಲಕರು ಸವಾರರಿಗೆ ಅಪಾಯವನ್ನುಂಟುಮಾಡುತ್ತಿದೆ. ಕಳೆದ ಏಳು-ಎಂಟು ವರ್ಷಗಳಿಂದ ಈ ರಸ್ತೆಯ ಸ್ಥಿತಿ ಹೀಗೇ ಮುಂದುವರೆದಿದೆ ಎಂದು ಸ್ಥಳೀಯ ಜನತೆ ಹೇಳುತ್ತಾರೆ.
ಹಲವಾರು ಬಾರಿ ಸ್ಥಳೀಯರು ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮಳೆಯ ನೀರು ರಸ್ತೆಯ ಹೊಂಡಗಳಲ್ಲಿ ತುಂಬಿಕೊಂಡು, ರಸ್ತೆ ಯಾವುದು, ಹೊಂಡ ಯಾವುದು ಎಂದು ತಿಳಿಯದೆ ಜನರು ಅಪಾಯಕ್ಕೆ ಒಳಗಾಗುವಂತಾಗಿದೆ.
ಹೊಂಡ ಬಿದ್ದ ರಸ್ತೆ |
ಮಳೆಯಿಂದ ಉಂಟಾದ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ಗಂಭೀರ ಅಡ್ಡಿಯುಂಟಾಗಿದೆ. ಈ ದುರಸ್ಥಿ ಸ್ಥಿತಿಯು ಸಾರ್ವಜನಿಕರು, ವಾಹನ ಚಾಲಕರು ಮತ್ತು ಬೈಕ್ ಸವಾರರಿಗೆ ತೀವ್ರ ಸಮಸ್ಯೆಗಳನ್ನು ಉಂಟುಮಾಡಿದೆ.
ಹೊಂಡಗಳಿಂದಾಗಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ, ವಾಹನಗಳು ನಿಧಾನವಾಗಿ ಚಲಿಸಬೇಕಾಗುತ್ತದೆ. ಇದರಿಂದಾಗಿ ಪ್ರಯಾಣದ ಸಮಯ ಹೆಚ್ಚಾಗುತ್ತಿದೆ. ಬೆಡಸಿಗೆಯಲ್ಲಿ ಧೂಳಿನಿಂದಾಗಿ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಮತ್ತು ಅಪಘಾತದಕ್ಕೆ ಅವಕಾಶವು ಹೆಚ್ಚಾಗಿದೆ.
ಹಿಂದೆ ಒಮ್ಮೆ ಯಾವುದೋ ಇಲಾಖೆಯು ರಸ್ತೆಯನ್ನು ಮಣ್ಣಿನಿಂದ ದುರಸ್ತಿ ಮಾಡುವ ಪ್ರಯತ್ನ ನಡೆಸಿತ್ತು. ಆದರೆ ಅದು ಸಂಪೂರ್ಣವಾಗಿರಲಿಲ್ಲ ಮತ್ತು ಮಳೆಗೆ ಕೊಚ್ಚಿಹೋಯಿತು ಎಂದು ಸ್ಥಳೀಯರು ಹೇಳುತ್ತಾರೆ.
ಬಿಸಗೋಡ್ ಕಡೆಯಿಂದ ಯಲ್ಲಾಪುರ ಕಡೆಗೆ ಬರುವ ಮತ್ತು ಹೋಗುವ ವಾಹನ ಚಾಲಕರು, ಬೈಕ್ ಸವಾರರು ಒಂದೂವರೆ ಕಿಲೋಮೀಟರ್ ಸಂಚರಿಸಲು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ.
ಈ ಸಮಸ್ಯೆಯಿಂದಾಗಿ ಸಂಭವಿಸುವ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ವಾಹನ ಚಾಲಕರು ಮತ್ತು ಬೈಕ್ ಸವಾರರು ಈ ರಸ್ತೆಯಲ್ಲಿ ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ.
ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಮಳೆ ಮುಗಿದ ತಕ್ಷಣ ಕನಿಷ್ಠ ಕೆಲವು ವರ್ಷಗಳ ಕಾಲ ಬಾಳಿಕೆ ಬರುವಂತೆ ದುರಸ್ತಿ ಮಾಡಿ ಸಾರ್ವಜನಿಕರ ಬಳಕೆಗೆ ನೀಡಬೇಕೆಂದು ಬಿಸಗೋಡ ನಿವಾಸಿ ಗುರುನಾಥ ಭಟ್ಟ ಹಾಗೂ ಸ್ಥಳೀಯ ಜನರು ಮನವಿ ಮಾಡುತ್ತಿದ್ದಾರೆ.
ಹೈಸ್ಕೂಲ್ ಮತ್ತು ಕನ್ನಡ ಶಾಲೆಗಳು ಇದ್ದರೂ, ವಿದ್ಯಾರ್ಥಿಗಳಿಗೆ ಬಂದು ಹೋಗಲು ಸಾಧ್ಯವಾಗುತ್ತಿಲ್ಲ ಎಂಬುದು ಖಂಡಿತ ದುಃಖಕರ ಸಂಗತಿ. ರಸ್ತೆಗಳ ಸ್ಥಿತಿ ಕೆಟ್ಟಿರುವುದರಿಂದ, ಹೊರಗಿನಿಂದ ವಾಹನ ಬಾಡಿಗೆಗೆ ತಂದರೆ, ಚಾಲಕರು ಡಬಲ್ ಬಾಡಿಗೆ ಕೇಳುತ್ತಾರೆ ಇಲ್ಲವೇ ವಾಹನ ಹಾಳಾಗುತ್ತದೆ ಎಂದು ಹೆದರಿಸುತ್ತಾರೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಸಂಬಂಧಿಸಿದ ಇಲಾಖೆಗಳು ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಹೊಂಡಗಳನ್ನು ತುಂಬಿಸಿ ರಸ್ತೆಗಳನ್ನು ದುರಸ್ತಿ ಮಾಡಿ ಸಾರ್ವಜನಿಕರು ಮತ್ತು ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.