ಯಲ್ಲಾಪುರ/ಕಾರವಾರ : ಪ್ರತಿ ವರ್ಷ ಮಳೆಗಾಲದಲ್ಲಿ ನೆರೆಯಿಂದ ಜನ ವಸತಿ ಪ್ರದೇಶಗಳಿಗೆ ನುಗ್ಗಿ ಜೀವಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಮೊಗವಳ್ಳಿ ಗ್ರಾಮಸ್ಥರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ರವಿವಾರ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಶಾಸಕ ಹೆಬ್ಬಾರ್ ಈ ಮನವಿ ಮಾಡಿದರು. ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಮೊಗವಳ್ಳಿ ಗ್ರಾಮವು ಮೊಗವಳ್ಳಿ ನದಿ ತೀರದಲ್ಲಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನದಿ ಉಕ್ಕಿ ಹರಿದು ಜನ ವಸತಿ ಪ್ರದೇಶಗಳಿಗೆ ನುಗ್ಗುತ್ತದೆ. ಇದರಿಂದಾಗಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಯಲ್ಲಾಪುರ- ಅಂಕೋಲಾ ತಾಲೂಕನ್ನು ಸಂಪರ್ಕಿಸುವ ಗುಳ್ಳಾಪುರ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಂಜಿನಿಯರಿಂಗ್ ಇಲಾಖೆಯು ಸಿದ್ಧಪಡಿಸಿರುವ ಅಂದಾಜು ಪಟ್ಟಿಯಂತೆ ಅನುದಾನವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳು ಮನವಿಯನ್ನು ಸ್ವೀಕರಿಸಿ ಅಂದಾಜು ವೆಚ್ಚದ ಪಟ್ಟಿಯನ್ನು ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೊಳಿ ಅವರ ಜೊತೆಗೂ ಹೆಬ್ಬಾರ್ ಅವರು ಸೇತುವೆಯ ಕುರಿತು ಗಮನಸೆಳೆದರು.
ಶಾಸಕ ಹೆಬ್ಬಾರ್ ಅವರ ಮನವಿಯ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿ, ಪರ್ಯಾಯ ಸ್ಥಳವನ್ನು ಗುರುತಿಸಿ ಶೀಘ್ರವಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.