ಯಲ್ಲಾಪುರ: ತಾಲೂಕಿನ ತೆಂಗಿಗೇರಿಯಲ್ಲಿ ಬುಧವಾರ ಬೆಳಿಗ್ಗೆ ಹೊಲದಲ್ಲಿ ಎಮ್ಮಗಳನ್ನು ಮೇಯಿಸಲು ತೆರಳಿದ ಇಬ್ಬರು ರೈತರ ಮೇಲೆ ಚಿರತೆ ದಾಳಿ ನಡೆಸಿ, ಇಬ್ಬರು ರೈತರು ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡ ರೈತರು ಕೋಳಿಕೇರಿಯ ದೇಶಪಾಂಡೆನಗರದ ನಿವಾಸಿಗಳಾದ ಸೋನು ಘಾಟು ಕೊಕರೆ (32) ಮತ್ತು ಲಕ್ಷ್ಮಣ ವಾಘು ಕೊಕರೆ (37) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ತಕ್ಷಣವೇ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ರೈತರು ತೆಂಗಿನಗೇರಿ ಹೊಲದಲ್ಲಿ ಎಮ್ಮೆಗಳನ್ನು ಮೇಯಿಸಲು ತೆರಳಿದಾಗ ಎಮ್ಮೆಗಳ ಜೊತೆ ನಾಯಿ ಕೂಡ ಹೊರಟಿದ್ದು, ನಾಯಿಯನ್ನು ಕಂಡ ಚಿರತೆ ದಾಳಿಮಾಡಿದೆ. ಓರ್ವ ರೈತನಮೇಲೆ ದಾಳಿಮಾಡಿದ ಚಿರತೆಯಿಂದ ರೈತನನ್ನು ತಪ್ಪಿಸಲು ಇನ್ನೋರ್ವ ಹೋದಾಗ ಆತನ ಮೇಲೂ ಚಿರತೆ ದಾಳಿ ಮಾಡಿದೆ.
ಅಸ್ಪತ್ರೆಗೆ ಪ್ರಭಾರೆ ಆರ್.ಎಫ್.ಓ ಡಿ.ಎಲ್. ಮಿರ್ಜಾನಕರ, ಡಿ.ಆರ್.ಎಫ್.ಓ ಮಂಜುನಾಥ ಕಾಂಬಳೆ, ಯಲ್ಲಾಪುರ ಡಿ.ಆರ್.ಎಫ್.ಓ ಶರಣು, ಹಾಗೂ ನಿವೃತ್ತ ಆರ್‌ಎಫ್‌ಓ ಮಠ ಭೇಟಿ ನೀಡಿದ್ದಾರೆ. ಡಿಎಫ್‌ಓ ಹರ್ಷಬಾನು ಹಾಗೂ ಎಸಿಎಫ್ ಎಚ್ ಸಿ ಆನಂದ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳುಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಈ ದಾಳಿಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಳ್ಳಿಗಳಲ್ಲಿ, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಜಾನುವಾರುಗಳು, ಮನೆ ಕಾಯುತ್ತಿರುವ ನಾಯಿಗಳನ್ನು ರಾತ್ರಿ-ಹಗಲು ಎನ್ನದೆ ಕಾಡುಪ್ರಾಣಿಗಳು ಹಿಡಿದುಕೊಂಡು ಹೋಗುತ್ತಿರುವುದರಿಂದ, ಗ್ರಾಮದ ಜನರು ಭಯದಿಂದ ದಿನ ಕಳೆಯುತ್ತಿದ್ದಾರೆ.