ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಕೃತಿ ವಿಕೋಪದ ನಡುವೆಯೇ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. , "ನಮ್ಮ ಪಕ್ಷದ ಮುಖಂಡರಾದ ವಿಶೇಷವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹೆಬ್ಬಾರ್ ಕೀಳುಮಟ್ಟದ ಆರೋಪ ಮಾಡಿದ್ದಾರೆ," "ವಿಶ್ವೇಶ್ವರ ಕಾಗೇರಿ ಅವರು ತತ್ವನಿಷ್ಠೆಯ ರಾಜಕಾರಣಿ. ಅವರು 30 ವರ್ಷಗಳಿಂದ ಜನಪ್ರಿಯ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು, ಯಲ್ಲಾಪುರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಹೆಬ್ಬಾರ್ ಅವರ ಅಹಂಕಾರ ಹಾಗೂ ಸ್ವಪ್ರತಿಷ್ಠೆಯ ಹೇಳಿಕೆಯನ್ನು ಖಂಡಿಸಿದ ಕೋಣೆಮನೆ, "ಹೆಬ್ಬಾರ್ ಅವರ ಟೀಕೆ ನಮ್ಮ ಜಿಲ್ಲೆಗೆ ಅವಮಾನ ತಂದಿದೆ. ಇದನ್ನು ಮುಂದುವರೆಸಿದರೆ, ನಾವು ಜನರ ಮುಂದೆ ಸತ್ಯಾಸತ್ಯತೆ ಬಿಚ್ಚಿಡುತ್ತೇವೆ," ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್. ಟಿ. ಪಾಟೀಲ, " ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡ ಹೆಬ್ಬಾರ್. ಮುಂದೆ ಅವರ ನಡೆ ಪಕ್ಷದ ಆಂತರಿಕ ಶಿಸ್ತಿಗೆ ವಿರುದ್ಧವಾಗಿತ್ತು. ಬಿಜೆಪಿ ಪಕ್ಷದಿಂದ ಆಯ್ಕೆಯಾದ ಅವರು, ಮೋದಿಯವರ ಹಾಗೂ ಪಕ್ಷದ ಮೇಲಿದ್ದ ಗೌರವವನ್ನು ಉಳಿಸಬೇಕಾಗಿತ್ತು. ಹೆಬ್ಬಾರ್ ಅವರ ರಾಜೀನಾಮೆ ಕೊಟ್ಟು ಪುನಃ ಚುನಾವಣೆಗೆ ಎದುರಿಸುವಂತೆ ಸ್ಪಷ್ಟಪಡಿಸಿದ ಅವರು, ತಮ್ಮ ವಯಕ್ತಿಕ ಹಿತಾಸಕ್ತಿಗೆ, ಮೋಜು ಮಜಕ್ಕಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ನಾವು ಅವರನ್ನು ಕರೆದಿರಲಿಲ್ಲ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಉಮೇಶ ಭಾಗ್ವತ, "ಹೆಬ್ಬಾರ್ ಕಾಗೇರಿ ವಿರುದ್ದ ಮಾಡಿದ ಟೀಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಬಿರುಸಿನ ಪ್ರಕೃತಿ ವಿಕೋಪದ ವೇಳೆ, ರಾಜಕೀಯ ಪ್ರಹಸನ ಇನ್ನಷ್ಟು ಜನರ ಸಮಸ್ಯೆಗಳನ್ನು ಹೆಚ್ಚಿಸುತ್ತವೆ," ಎಂದು ಹೇಳಿದರು.