Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Saturday, 6 July 2024

ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಮನವಿ

ಯಲ್ಲಾಪುರ : ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿಗಳಿಗೆ ರಾಜ್ಯ ಸರಕಾರಕ್ಕೆ ಕೊಟ್ಟ ಮಾತು ಈಡೇರಿಸಲು ಒತ್ತಾಯಿಸಿ, ಪಿಂಚಣಿ ವಂಚಿತ ನೌಕರರ ಸಂಘದಿಂದ, ಪಿಂಚಣಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ತಹಶೀಲದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
   ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ 2006 ರ ಪೂರ್ವದಲ್ಲಿ ಮತ್ತು ನಂತರದಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ಪಿಂಚಣಿ ಇಲ್ಲದೆ ದುಡಿಯುತ್ತಿದ್ದಾರೆ. ಈಗಾಗಲೇ ಸಮಾರು 3 ಸಾವಿರ ಜನ ನಿವೃತ್ತರಾಗಿ ಸರಕಾರದಿಂದ ಬಿಡಿಗಾಸಿನ ಪರಿಹಾರವಿಲ್ಲದೆ ಅತ್ಯಂತ ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ನಾನಾ ಕಾರಣಗಳಿಂದ ಅಕಾಲಿಕವಾಗಿ ನಿಧನರಾದ ಶಿಕ್ಷಕರ ಮತ್ತು ನೌಕರರ ಅವಲಂಬಿತ ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಪಿಂಚಣಿ ಬೇಡಿಕೆ ಮತ್ತು ನಿಶ್ಚಿತ ಪಿಂಚಣಿ ಅನುಷ್ಠಾನ ಮತ್ತು ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯಿದೆ 2014 ನ್ನು ರದ್ದುಗೊಳಿಸಲು ಆಗ್ರಹಿಸಿ ಸಂಘಟನೆಯಿಂದ ದಶಕಗಳಿಂದ ಹತ್ತು ಹಲವು ಹೋರಾಟಗಳನ್ನು ಮಾಡಿದ್ದೇವೆ. ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 141 ದಿನಗಳ ಐತಿಹಾಸಿಕ ಹೋರಾಟ ಮಾಡಲಾಯಿತು. ನಿವೃತ್ತಿ ಹೊಂದಿದ ಕೆಲ ಶಿಕ್ಷಕರು ಹೋರಾಟದ ಸಮಯದಲ್ಲಿ ತಮ್ಮ ಜೀವಗಳನ್ನು ಕೂಡ ಕಳೆದುಕೊಂಡಿದ್ದಾರೆ ಇಷ್ಟಾದರೂ ಯಾವ ಸರಕಾರಗಳು ಅನುದಾನಿತ ನೌಕರರ ಅಳಲು ಆಲಿಸುವ ಕೆಲಸ ಮಾಡಿಲ್ಲ ಇದಲ್ಲದೆ ಅನುದಾನಿತ ಶಾಲೆ ಕಾಲೇಜುಗಳ ಸಾವಿರಾರು ನೌಕರರು ಈ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 07- 10-2022 ರಿಂದ 27-02-2023 ರವರೆಗೆ ಸುಧೀರ್ಘ 141 ದಿನಗಳ ಕಾಲ ಫ್ರೀಡಂ ಪಾರ್ಕಿನಲ್ಲಿ ಹೋರಾಟ ಮಾಡಿದಾಗ್ಯೂ ಬೇಡಿಕೆ ಈಡೇರದೆ ಇದ್ದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಾದಾಮಿ ತಾಲೂಕಿನ ಗುಳೇದಗುಡ್ಡದ ನಿವೃತ್ತ ಶಿಕ್ಷಕ ದಿ. ಸಿದ್ದಯ್ಯ ಹಿರೇಮಠ ಅವರ ಮನೆಗೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖುದ್ದು ತಾವೇ ತೆರಳಿ ಆ ಕುಟುಂಬಕ್ಕೆ ವೈಯುಕ್ತಿಕವಾಗಿ ಎರಡು ಲಕ್ಷ ಹಣ ನೀಡಿದ್ದಲ್ಲದೇ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನುದಾನ ರಹಿತ ಅವಧಿಯನ್ನು ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡುವ ಭರವಸೆಯನ್ನೂ ನೀಡಿದ್ದರು.
   ಈಗ ಅವರದೆ ಪಕ್ಷ ಅಧಿಕಾರಿಕ್ಕೆ ಬಂದು ವರ್ಷ ಕಳೆದರೂ ನಮ್ಮ ಬೇಡಿಕೆ ಈಡೇರಿಸಲು ಮುಂದಾಗದಿರುವುದನ್ನು ಖಂಡಿಸಿ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಗಡುವು ನೀಡಿ ಮನವಿ ಸಲ್ಲಿಸಿದರು.
 
  ಮನವಿ ಸ್ವೀಕರಿಸಿದ ತಹಶೀಲ್ದಾರ ಅಶೋಕ ಭಟ್ಟ ಸರ್ಕಾರಕ್ಕೆ ರವಾನಿಸುವ ಭರವಸೆ ನೀಡಿದರು.
    ಈ ಸಂದರ್ಭದಲ್ಲಿ ಪಿಂಚಣಿ ವಂಚಿತ ನೌಕರರ ಸಂಘದ ಜಗದೀಶ ಯು ಭಟ್, ಎಂ ರಾಜಶೇಖರ, ನಾಗಭೂಷಣ ಹೆಗಡೆ ಸದಾನಂದ ಜೆ ನಾಯಕ್ ಚಂದ್ರಶೇಖರ ಎಸ್ ಸಿ, ಮುಕ್ತಾ ಶಂಕರ್, ಖೈರುನ್ ಶೇಖ, ಪ್ರೇಮಾ ಗಾಂವ್ಕರ, ಮಹೇಶ ನಾಯ್ಕ, ಶ್ಯಾಮಲಾ ಕೆರೆಗದ್ದೆ, ಪ್ರಸನ್ನ ಹೆಗಡೆ, ಮಮ್ತಾಜ್ ಎಂ ಶೇಖ, ನವೀನಾ ಎ ಗುನಗಾ, ಪ್ರದೀಪ‌ ಪಿ ನಾಯ್ಕ, ನೆಲ್ಸನ್ ಎಂ ಗೊನ್ಸಾಲ್ವೀಸ್ ಮುಂತಾದ ಶಿಕ್ಷಕರು ಸಿಬ್ಬಂದಿಗಳು ಇದ್ದರು.